ಕಣಿವೆ, ನ. 20: ವೀರಾಜಪೇಟೆ ತಾಲೂಕು ವ್ಯಾಪ್ತಿಗೆ ಒಳಪಡುವ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ದುಬಾರೆಯ ಸಾಕಾನೆ ಶಿಬಿರದಲ್ಲಿ ಅಲ್ಲಿನ ಆದಿವಾಸಿ ಕುಟುಂಬಗಳ ಎಳೆಯ ಮಕ್ಕಳಿಗೆಂದೇ ತೆರೆದಿದ್ದ ಅಂಗನವಾಡಿಗೆ ಬೀಗಹಾಕಿ ಒಂಭತ್ತು ತಿಂಗಳು ಕಳೆದಿದೆ. ಇದುವರೆಗೂ ಮತ್ತೆ ಅಂಗನವಾಡಿಯನ್ನು ತೆರೆಯುವ ಪ್ರಯತ್ನಕ್ಕೆ ವೀರಾಜಪೇಟೆ ತಾಲ್ಲೂಕು ಆಡಳಿತ ಮುಂದಾಗಿಲ್ಲ ಎಂದು ದುಬಾರೆಯ ಹಾಡಿ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದುಬಾರೆ ಹಾಡಿಯಲ್ಲಿ ಅರಣ್ಯ ಇಲಾಖೆಗೆ ಒಳಪಡುವ ಸಾಕಾನೆಗಳನ್ನು ಪಾಲನೆ ಮಾಡುವ ಮಾವುತರು ಹಾಗೂ ಕಾವಾಡಿಗಳು ಸೇರಿದಂತೆ ಸ್ಥಳೀಯ ನಿವಾಸಿಗಳ ಉಪಯೋಗಕ್ಕೆ ತೆರೆದಿದ್ದ ಅಂಗನವಾಡಿ ಕಟ್ಟಡಕ್ಕೆ ಕಳೆದ ಏಪ್ರಿಲ್‍ನಲ್ಲಿ ಬೀಗ ಹಾಕಲಾಗಿದೆ. ತಾಲೂಕು ಅಧಿಕಾರಿಗಳು ಅಥವಾ ಚುನಾಯಿತ ಜನಪ್ರತಿನಿಧಿಗಳು ಯಾರೂ ಕೂಡ ಇತ್ತ ಆಗಮಿಸಿ ಅಂಗನವಾಡಿಯನ್ನು ತೆರೆದು ನೈಜ ಫಲಾನುಭವಿಗಳಾದ ಗಿರಿಜನರ ಮಕ್ಕಳ ಉಪಯೋಗಕ್ಕೆ ನೀಡುತ್ತಿಲ್ಲ ಎಂದು ನಿವಾಸಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸ್ಥಳಕ್ಕೆ ತೆರಳಿದ “ಶಕ್ತಿ''ಯೊಂದಿಗೆ ಮಾತನಾಡಿದ ದುಬಾರೆ ಸಾಕಾನೆ ಶಿಬಿರದ ಕೆಲವು ನಿವಾಸಿಗಳು, ನಾವು ಸಾಕಾನೆಗಳನ್ನು ಕಾಡಿಗಟ್ಟುವ ಕಾಯಕದಲ್ಲಿ ನಿರತರಾಗುತ್ತೇವೆ. ಕುಟುಂಬಗಳ ಮಹಿಳೆಯರು ಕೂಲಿಗೆ ತೆರಳುತ್ತಾರೆ. ಆದರೆ, ನಮ್ಮ ಮಕ್ಕಳಿಗೆ ಸರ್ಕಾರದಿಂದ ಸಿಗಬೇಕಾದ ಸವಲತ್ತುಗಳು ಸಿಗುತ್ತಿಲ್ಲ. ನಾವು ಎಲ್ಲಿಗೆ ಹೋಗಬೇಕು ? ಯಾರನ್ನೂ ಕೇಳಬೇಕು ಅಂತಾನು ಗೊತ್ತಿಲ್ಲ. ಹಾಗಾಗಿ ಜಿಲ್ಲಾಧಿಕಾರಿಗಳು ಇತ್ತ ಆಗಮಿಸಿ ನಮ್ಮ ಸಮಸ್ಯೆಗಳನ್ನು ಅರಿತು ಬಗೆಹರಿಸಬೇಕೆಂದು ಒತ್ತಾಯಿಸಿದರು.