ಗೋಣಿಕೊಪ್ಪಲು. ನ. 20: ಸಹಕಾರ ಸಂಘಕ್ಕೆ ತನ್ನದೆ ಆದ ಇತಿಹಾಸವಿದ್ದು ಕ್ರೀಯಾಶೀಲ ವ್ಯಕ್ತಿಗಳು ಸಂಘದ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದೇಯಾದಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನೀಡಲು ಸಾಧ್ಯ ಎಂದು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ ಹೇಳಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಹಾಗೂ ಕಾನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಕಾನೂರು ಸಹಕಾರ ಸಂಘದ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ 72ನೇ ಅಖಿಲ ಭಾರತ ಸಹಕಾರ ಸಪ್ತಾಹದ 5ನೇ ದಿನದ ಕಾರ್ಯಕ್ರಮದ ಅಂಗವಾಗಿ ‘ಸಹಕಾರಿ ಉದ್ಯಮಶೀಲತೆಯಿಂದ ಯುವಜನ, ಮಹಿಳಾ ಮತ್ತು ಅಬಲ ವರ್ಗದ ಸಬಲೀಕರಣ’ ದಿನಾಚರಣೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮ ಮಟ್ಟದಲ್ಲಿ ಸಹಕಾರ ಸಂಘಗಳು ಉತ್ತಮ ಬೆಳವಣಿಗೆಯತ್ತ ದಾಪುಗಾಲು ಹಾಕುತ್ತಿವೆ. ಹಿರಿಯ ಸಹಕಾರಿಗಳು ಸಹಕಾರ ಸಂಘದ ಏಳಿಗೆಗೆ ಅಮೂಲ್ಯ ಕೊಡುಗೆಯನ್ನು ನೀಡಿದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿರುವ ಸಹಕಾರ ಸಂಘಗಳು ಪ್ರಗತಿಪಥದತ್ತ ಸಾಗುತ್ತಿವೆ ಎಂದರು.

ರೈತರು ತಮ್ಮ ಕೀಳರಿಮೆಯನ್ನು ಬಿಡುವಂತಾಗಬೇಕು. ದಲ್ಲಾಳಿಗಳ ವ್ಯವಸ್ಥೆಗೆ ಮಾರು ಹೋಗಬಾರದು, ಸಹಕಾರ ಸಂಘದ ಆಮೂಲಾಗ್ರ ಸುಧಾರಣೆಗೆ ಕೇಂದ್ರ ಸರ್ಕಾರ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದೆ.ಇದರಿಂದ ಪ್ರತಿ ರೈತರಿಗೆ ಪ್ರಯೋಜನವಾಗಲಿದೆ. ಸಹಕಾರ ಸಂಘದಲ್ಲಿ ಕ್ರೀಯಾಶೀಲ ಹಾಗೂ ಬದ್ದತೆಯಿಂದ ಆಡಳಿತ ಮಂಡಳಿ ಕೆಲಸ ನಿರ್ವಹಿಸಿದ್ದಲ್ಲಿ ಸಂಸ್ಥೆಯನ್ನು ಉನ್ನತೀಕರಣಗೊಳಿಸಬಹುದು. ಸಣ್ಣ-ಪುಟ್ಟ ನ್ಯೂನತೆಗಳನ್ನು ಸರಿದೂಗಿಸುವ ಮೂಲಕ ಸಂಘದ ಸದಸ್ಯರುಗಳಿಗೆ ಸಕಾಲದಲ್ಲಿ ಸಿಗುವ ಸವಲತ್ತುಗಳನ್ನು ನೀಡುವಂತಾಗಬೇಕು ಎಂದರು.

ದವಸ ಭಂಡಾರಗಳು ದ. ಕೊಡಗಿನಲ್ಲಿ ಹೆಚ್ಚಾಗಿ ಕಾರ್ಯ ನಿರ್ವಹಿಸುತ್ತಿವೆ. ಪರಸ್ಪರ ನಂಬಿಕೆಯ ಮೂಲಕ ಆರಂಭವಾದ ಧವಸ ಭಂಡಾರಗಳು ಇಂದು ಬೆಳವಣಿಗೆಯತ್ತ ಸಾಗುತ್ತಿವೆ. ಭಾರತ ದೇಶದಲ್ಲಿ 8.50 ಲಕ್ಷ ಸಹಕಾರ ಸಂಘಗಳು ಕೆಲಸ ನಿರ್ವಹಿಸುತ್ತಿವೆ. 3 ಕೋಟಿ ಸಹಕಾರಿಗಳು ಸಹಕಾರ ಸಂಘದಲ್ಲಿ ಸದಸ್ಯತ್ವವನ್ನು ಪಡೆದಿದ್ದಾರೆ. ಕೊಡಗಿನ ತಲ್ತಾರೆ ಶೆಟ್ಟಳ್ಳಿಯಲ್ಲಿ ಆರಂಭದಲ್ಲಿ ಸಹಕಾರ ಸಂಘವನ್ನು ಆರಂಭಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ನವಂಬರ್ ತಿಂಗಳಿನಲ್ಲಿ ದೇಶಾದಾಧ್ಯಂತ ಸಹಕಾರ ಸಪ್ತಾವು ಏಕ ಕಾಲದಲ್ಲಿ 7 ದಿನಗಳ ಕಾಲ ನಡೆಯುತ್ತಿದೆ. ಇದರಿಂದ ಸಹಕಾರಿಗಳ ಪರಸ್ಪರ ಭೇಟಿಗೆ ಅನುಕೂಲವಾಗುತ್ತಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಕೊಡಂದೇರ ಪಿ. ಗಣಪತಿ ಮಾತನಾಡಿ ಕೊಡಗಿನ ರೈತರ ಬೇಡಿಕೆಗೆ ಅನುಕೂಲವಾಗಿ ಸಹಕಾರ ಸಂಘಗಳು ಕೆಲಸ ನಿರ್ವಹಿಸುತ್ತಿವೆ. ಭ್ರಷ್ಟಾಚಾರ ರಹಿತ ಆಡಳಿತ ನಡೆಸಲು ಒತ್ತು ನೀಡಲಾಗುತ್ತಿದೆ. ಹಲವು ಸಂಘಗಳಲ್ಲಿ ಸಣ್ಣ-ಪುಟ್ಟ ವ್ಯತ್ಯಾಸಗಳನ್ನು ಗಮನಿಸಿದ್ದೇವೆ. ಅಂತಹ ಸಂಘಗಳಿಗೆ ಸಲಹೆ ಸೂಚನೆ ನೀಡುವ ಮೂಲಕ ಪ್ರಗತಿಯತ್ತ ಸಾಗಲು ನಿರ್ದೇಶನಗಳನ್ನು ನೀಡಲಾಗುತ್ತಿದೆ. ಕಾನೂರು ಸಹಕಾರ ಸಂಘವು ತನ್ನದೇ ಆದ 50 ಏಕರೆ ಕಾಫಿ ತೋಟವನ್ನು ಹೊಂದಿರುವುದು ಶ್ಲಾಘನೀಯ. ಹಿರಿಯ ಸಹಕಾರಿಗಳು ಅಂದಿನ ಕಾಲದಲ್ಲಿ ಸಂಸ್ಥೆಯ ಬೆಳವಣಿಗೆಗೆ ಪೂರಕವಾಗಿ ಅಮೂಲ್ಯ ಸೇವೆ ಸಲ್ಲಿಸಿದ್ದರು. ಅಂತಹ ಸಹಕಾರಿಯನ್ನು ಇಂದು ನೆನೆಸಿಕೊಳ್ಳುವ ಅವಕಾಶ ನಮ್ಮೆಲ್ಲರಿಗೆ ಒದಗಿ ಬಂದಿದೆ ಎಂದರು.

ರಾಷ್ಟ್ರೀಕೃತ ಬ್ಯಾಂಕನ್ನು ಮೀರಿಸಿ ಸಹಕಾರ ಸಂಘಗಳು ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಸಾಲ ಸೌಲಭ್ಯಗಳನ್ನು ನೀಡುತ್ತಾ ಬರುತ್ತಿವೆ. ಸಹಕಾರ ಸಪ್ತಾಹದಲ್ಲಿ ಜನರು ನಿರೀಕ್ಷೆಗೂ ಮೀರಿ ಆಗಮಿಸುತ್ತಿರುವುದು ಸಹಕಾರ ಸಂಘದ ಮೇಲಿರುವ ನಂಬಿಕೆಯಿಂದ; ಇಂತಹ ನಂಬಿಕೆಯನ್ನು ಉಳಿಸಿಕೊಂಡು ಹೋಗುವ ದೊಡ್ಡ ಜವಾಬ್ದಾರಿ ಆಡಳಿತ ಮಂಡಳಿ ಮೇಲಿದೆ ಎಂದರು. ಸಹಕಾರ ಸಂಘದಲ್ಲಿ ಪ್ರತಿ ಸದಸ್ಯನಿಗೆ ಮಹಾಸಭೆಯಲ್ಲಿ ಸಂಘದ ಪ್ರತಿ ಪೈಸೆಯ ಲೆಕ್ಕಚಾರವನ್ನು ಕೇಳುವ ಅಧಿಕಾರವಿದೆ. ಆದರೆ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಇಂತಹ ವ್ಯವಸ್ಥೆ ಇರುವುದಿಲ್ಲ. ಸಹಕಾರ ಸಂಘಗಳು ಇಂದು ರೈತರ ಕಷ್ಟಗಳಿಗೆ ಸ್ಪಂದಿಸುತ್ತಿದೆ ಎಂದರು.

ಕಾನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕಾಡ್ಯಮಾಡ ಎಸ್. ಭರತ್ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಹಿರಿಯ ಸಹಕಾರಿಗಳನ್ನು ಗೌರವಿಸಿ, ಸನ್ಮಾನಿಸಲಾಯಿತು. ಹಿರಿಯ ಸಹಕಾರಿಗಳಾದ ಮಚ್ಚಮಾಡ ಕಂದಾ ಭೀಮಯ್ಯ, ರಾಜೀವ್ ಬೋಪಯ್ಯ ತಮ್ಮ ಅಭಿಪ್ರಾಯವನ್ನು ಸಭೆಯ ಮುಂದಿಟ್ಟರು. ದಿನದ ಮಹತ್ವ ಕುರಿತು ಕೊಡಗು ಜಿಲ್ಲಾ ಸಹಕಾರ ಯೂನಿಯನ್‍ನ ನಿರ್ದೇಶಕಿ, ನಿವೃತ್ತ ಪ್ರಾಂಶುಪಾಲರಾದ ಎಂ.ಎಂ. ಶ್ಯಾಮಲ ವಿಷಯ ಮಂಡನೆ ಮಾಡಿದರು.

ವೇದಿಕೆಯಲ್ಲಿ ಕೊಡಗು ಜಿಲ್ಲಾ ಸಹಕಾರ ಯೂನಿಯನ್‍ನ ನಿರ್ದೇಶಕರುಗಳಾದ ಅಡ್ಡಂಡ ಸಿ. ಕುಶಾಲಪ್ಪ, ಮೂಕಚಂಡ ಟಿ.ಸುಬ್ಬಯ್ಯ, ಅಜ್ಜಿಕುಟ್ಟಿರ ಎಂ. ಮುತ್ತಪ್ಪ, ಹೊಟ್ಟೆಂಗಡ ಎಂ. ರಮೇಶ್, ಎಸ್.ಆರ್.ಸುನೀಲ್ ರಾವ್, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ನಿರ್ದೇಶಕರುಗಳಾದ ಕುಂಞಂಗಡ ಅರುಣ್ ಭೀಮಯ್ಯ, ಗುಮ್ಮಟ್ಟಿರ ಕಿಲನ್ ಗಣಪತಿ, ಕಾನೂರು ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಚಿರಿಯಪಂಡ ಈಶ ಬೆಳ್ಳಿಯಪ್ಪ,ಕೊಡಗು ಜಿಲ್ಲಾ ಯೂನಿಯನ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ಸೇರಿದಂತೆ ಕಾನೂರು ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರುಗಳು ಉಪಸ್ಥಿತರಿದ್ದರು. ಕಾನೂರು ಕೃಷಿ ಪತ್ತಿನ ಸಹಕಾರ ಸಂಘದ ಶಮ್ಮಿ ಪೂಣಚ್ಚ, ಕುಸುಮ, ಸುಮಿತ್ರ ಸುರೇಶ್ ಪ್ರಾರ್ಥಿಸಿ, ಯೋಗೆಂದ್ರ ನಾಯಕ್ ನಿರೂಪಿಸಿ, ವಂದಿಸಿದರು. ಸುತ್ತಮುತ್ತಲಿನ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.