ಗೋಣಿಕೊಪ್ಪಲು, ನ.20: ಕೊಡಗಿನಲ್ಲಿ ಹಾಕಿ ಕೂರ್ಗ್ ಸೇರಿದಂತೆ ಹಲವು ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಎಲ್ಲಾ ಸಂಸ್ಥೆಗಳ ಉದ್ದೇಶಗಳು ಹಾಕಿ ಕ್ರೀಡೆಯನ್ನು ಪ್ರೋತ್ಸಾಹಿಸುವುದಾಗಿದೆ. ಎಲ್ಲಾ ಸಂಸ್ಥೆಗಳನ್ನು ಒಟ್ಟು ಗೂಡಿಸಿ ಹಾಕಿ ಕ್ರೀಡೆಗೆ ಮತ್ತಷ್ಟು ಶಕ್ತಿ ತುಂಬಲು ಪ್ರಯತ್ನ ಮಾಡಲಾಗುವುದು ಎಂದು ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡೀರ ಎಸ್.ಅರುಣ್ ಮಾಚಯ್ಯ ಹೇಳಿದರು.
ದ.ಕೊಡಗಿನ ಕೋಣನಕಟ್ಟೆಯ ಕಲ್ಚರಲ್ ರಿಕ್ರಿಯೇಷನ್ ಕ್ಲಬ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅರುಣ್ಮಾಚಯ್ಯ, ಹಾಕಿಯ ತವರೂರು ಕೊಡಗಿನಲ್ಲಿ ಹಲವು ಸಂಸ್ಥೆಗಳು ಕ್ರೀಡೆಯ ಪ್ರೋತ್ಸಾಹಕ್ಕಾಗಿ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಲೇ ಬರುತ್ತಿವೆ. ಆದರೆ ಕ್ರೀಡಾಪಟುಗಳಿಗೆ ಇದರಿಂದ ಅಷ್ಟಾಗಿ ಪ್ರಯೋಜನವಾಗುತ್ತಿಲ್ಲ.
ಈ ನಿಟ್ಟಿನಲ್ಲಿ ವಿವಿಧ ಹಾಕಿ ಸಂಸ್ಥೆಗಳನ್ನು ಒಟ್ಟುಗೂಡಿಸಿ ಒಂದಾಗಿ ಹಾಕಿ ಕ್ರೀಡೆಯನ್ನು ಮತ್ತಷ್ಟು ಬಲ ಪಡಿಸುವ ನಿಟ್ಟಿನಲ್ಲಿ ಸದ್ಯದಲ್ಲಿಯೇ ಬೆಂಗಳೂರಿನಲ್ಲಿ ಉನ್ನತ ಮಟ್ಟದ ಸಭೆಯನ್ನು ಆಯೋಜಿಸಲಾಗುವುದು ಈ ಸಭೆಗೆ ಹಲವು ಸಂಸ್ಥೆಯ ಪ್ರಮುಖರನ್ನು ಆಹ್ವಾನಿಸುವ ಮೂಲಕ ಸಾಧಕ ಬಾಧಕಗಳ ಬಗ್ಗೆ ಸುಧೀರ್ಘ ಚರ್ಚೆ ನಡೆಸಿ ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದರು.
ಕ್ರೀಡಾ ವಸತಿ ಶಾಲೆಗಳಲ್ಲಿ ಕೇವಲ 10ನೇ ತರಗತಿಯವರೆಗೆ ಮಾತ್ರ ಅವಕಾಶಗಳು ಲಭ್ಯವಾಗುತ್ತಿವೆ. ತೇರ್ಗಡೆಯಾದ ನಂತರ ವಿದ್ಯಾರ್ಥಿಗಳಿಗೆ ಮುಂದಿನ ಭವಿಷ್ಯ ಕಷ್ಟವಾಗುತ್ತಿದೆ. ಈ ನಿಟ್ಟಿನಲ್ಲಿ ಎಸ್ಎಸ್ಎಲ್ಸಿ ನಂತರ ಲಭ್ಯವಿರುವ ಸಂಪನ್ಮೂಲಗಳನ್ನೇ ಬಳಸಿಕೊಂಡು ದ್ವಿತೀಯ ಪಿಯುಸಿ ಮುಗಿಸುವವರೆಗೂ ಕ್ರೀಡಾ ವಸತಿ ಶಾಲೆಗಳಲ್ಲಿ ಇರುವ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿ ಕೊಡುವ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಕ್ರೀಡೆಯಲ್ಲಿ ಮುಂದೆ ಸಾಗಲು ಅನುಕೂಲವಾಗಲಿದೆ. ಆ ನಿಟ್ಟಿನಲ್ಲಿ ಕ್ರೀಡಾಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದರು.
ಕೋಣನಕಟ್ಟೆ ಕಲ್ಚರಲ್ ಮತ್ತು ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ಪುಚ್ಚಿಮಾಡ ಕಿಶೋರ್ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ನಿಖಟಪೂರ್ವ ಡೀನ್ ಡಾ. ಚೆಪ್ಪುಡೀರ ಕುಶಾಲಪ್ಪ ಮಾತನಾಡಿ, ಅರುಣ್ ಮಾಚಯ್ಯ ಅವರು ಕ್ರೀಡಾ ಪ್ರಾಧಿಕಾರದಲ್ಲಿ ಲಭಿಸಿರುವ ಜವಾಬ್ದಾರಿಯನ್ನು ನಿಭಾಯಿಸುವ ಮೂಲಕ ಕೊಡಗಿನ ಕ್ರೀಡಾಪಟುಗಳಿಗೆ ಮತ್ತಷ್ಟು ಸ್ಪೂರ್ತಿದಾಯಕವಾಗಲಿ ಎಂದು ಆಶಿಸಿದರು.ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯರಾದ ಕಳ್ಳಿಚಂಡ ಕಾಶಿ, ಚೆಪ್ಪುಡೀರ ಕಿಟ್ಟು, ಅರುಣ್ ಮಾಚಯ್ಯ ಅವರ ಪತ್ನಿ ಚಾಂದಿನಿ ಮಾಚಯ್ಯ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಕೋಣನಕಟ್ಟೆ ಕಲ್ಚರಲ್ ಮತ್ತು ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ಪುಚ್ಚಿಮಾಡ ಕಿಶೋರ್ ಸ್ವಾಗತಿಸಿ,ಬೊಟ್ಟಂಗಡ ಪುಷ್ಪ ಮಂದಪ್ಪ ಪ್ರಾರ್ಥಿಸಿ, ಪುಚ್ಚಿಮಾಡ ಅಶೋಕ್ ನಿರೂಪಿಸಿ, ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ ವಂದಿಸಿದರು. ಹಿರಿಯರಾದ ಪುಚ್ಚಿಮಾಡ ಲಾಲ, ಕೊಳುವಂಡ ಸುಬ್ರಮಣಿ, ಚೆಪ್ಪುಡೀರ ರಾಧ ಅಚ್ಚಯ್ಯ, ಸೇರಿದಂತೆ ಕ್ಲಬ್ನ ಕಾರ್ಯದರ್ಶಿ ನಿರ್ದೇಶಕರು, ಊರಿನ ಪ್ರಮುಖರು ಪಾಲ್ಗೊಂಡಿದ್ದರು.