ಮಡಿಕೇರಿ, ನ. 20: ಕುಶಾಲ ನಗರದ ವೈದ್ಯರೊಬ್ಬರಿಗೆ ಮಾನಸಿಕ ಕಿರುಕುಳ ನೀಡುತ್ತಿರುವುದಲ್ಲದೆ ರೂ.10 ಲಕ್ಷ ಹಣ ನೀಡುವಂತೆ ಬೆದರಿಕೆ ಒಡ್ಡುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಮೇಲೆ ಕಠಿಣ ಕ್ರಮಕ್ಕೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರಕಾರಿ ವೈದ್ಯಾಧಿಕಾರಿಗಳ ಸಂಘದ ಕೊಡಗು ಜಿಲ್ಲಾ ಘಟಕದ ವತಿಯಿಂದ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರಿಗೆ ಇಂದು ದೂರು ನೀಡಲಾಯಿತು.

ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ವೈದ್ಯಾಧಿಕಾರಿ ಡಾ.ಚೇತನ್ ಎಂ.ಯು ಅವರಿಗೆ ಪ್ರಖ್ಯಾತ್ ಎಂಬ ವ್ಯಕ್ತಿ ಹಣದ ಬೇಡಿಕೆ ಇಟ್ಟಿದ್ದಲ್ಲದೆ ಮಾನಸಿಕ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ ಡಾ.ಚೇತನ್ ಹಾಗೂ ರಾಜ್ಯ ಸರಕಾರಿ ವೈದ್ಯಾಧಿಕಾರಿಗಳ ಸಂಘದ ಕೊಡಗು ಜಿಲ್ಲಾ ಘಟಕದ ಸುಮಾರು 40ಕ್ಕೂ ಅಧಿಕ ವೈದ್ಯರು ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಆಗಮಿಸಿ ಎಸ್.ಪಿಗೆ ದೂರು ಸಲ್ಲಿಸಿದರು.

2020ನೇ ಇಸವಿಯಲ್ಲಿ ಡಾ. ಚೇತನ್ ಅವರು ಬಸವನಹಳ್ಳಿಯ ಸಂಚಾರಿ ಆರೋಗ್ಯ ಗಿರಿಜನ ಘಟಕದಲ್ಲಿ ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರ ನಿರ್ದೇಶನದ ಮೇರೆಗೆ 13.3.2020 ರಂದು ಹೆಬ್ಬಾಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕುಟುಂಬ ಕಲ್ಯಾಣ ಶಸ್ತ್ರಚಿಕಿತ್ಸೆ ಕ್ಯಾಂಪ್ ನೆರವೇರಿಸಿದ್ದರು. ಈ ಕ್ಯಾಂಪ್‍ನಲ್ಲಿ ಡಾ.ಚೇತನ್ ಅವರು ಹಲವರಿಗೆ ಯಶಸ್ವಿಯಾಗಿ ಟ್ಯುಬೆಕ್ಟಮಿ -ಸಂತಾನಹರಣ ಶಸ್ತ್ರಚಿಕಿತ್ಸೆ ನೆರ ವೇರಿಸಿದ್ದರು. ತಾ.6-11-2025 ರಂದು ಪ್ರಖ್ಯಾತ್ ಎಂಬ ವ್ಯಕ್ತಿಯು ಡಾ.ಚೇತನ್ ಅವರಿಗೆ ಕರೆ ಮಾಡಿ, 4ನಾಲ್ಕನೇ ಪುಟಕ್ಕೆ (ಮೊದಲ ಪುಟದಿಂದ)

ಚಿಕ್ಕಳುವಾರ ಗ್ರಾಮದ ಸೋಮಶೇಖರ್ ಎಂಬವರ ಪತ್ನಿ ರೇಣುಕಾ ಅವರಿಗೆ ತಾವು 13.3.2020 ರಂದು ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿದ್ದರೂ ಆಕೆ ಗರ್ಭಿಣಿಯಾಗಿದ್ದಾರೆ. ತಾವು ಚಿಕಿತ್ಸೆ ಸರಿಯಾಗಿ ನೀಡದಿರುವುದರಿಂದ ಈ ರೀತಿ ಆಗಿದ್ದು, ಪರಿಹಾರವಾಗಿ ಹಣವನ್ನು ನೀಡಬೇಕಾಗಿ ಬೆದರಿಕೆ ಒಡ್ಡಿದ್ದಾನೆ.

ಇದಕ್ಕೆ ವೈದ್ಯರು ಪ್ರತಿಕ್ರಿಯಿಸಿದ್ದು, ಸಂತಾನಹರಣ ಶಸ್ತ್ರಚಿಕತ್ಸೆಗೆ ಒಳಗಾದವರ ಪೈಕಿ ಶೇ. 0.5 ರಿಂದ ಶೇ.1 ರಷ್ಟು ಮಂದಿ ಗರ್ಭಿಣಿಯಾಗುವ ಸಾಧ್ಯತೆಗಳಿವೆ. ಇದೇ ಕಾರಣಕ್ಕೆ ಈ ರೀತಿ ಆದವರು ಕುಟುಂಬ ಕಲ್ಯಾಣ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿದರೆ ರೂ. 60 ಸಾವಿರ ಸರಕಾರದಿಂದ ಪರಿಹಾರ ಮೊತ್ತ ನೀಡುವ ಸೌಲಭ್ಯವೂ ಇದೆ ಎಂಬುದಾಗಿ ವಿವರಿಸಿದ್ದಾರೆ. ಇದನ್ನು ಒಪ್ಪದ ಪ್ರಖ್ಯಾತ್, ರೂ.10 ಲಕ್ಷ ಹಣ ನೀಡಬೇಕಾಗಿ ವೈದ್ಯರನ್ನು ಒತ್ತಾಯಿಸುತ್ತಿರುವುದಾಗಿ ಡಾ. ಚೇತನ್ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದಲ್ಲದೆ ತಾ.14 ರಂದು ಡಾ.ಚೇತನ್ ಅವರು ಕರ್ತವ್ಯ ನಿರ್ವಹಿಸುತ್ತಿದ್ದ ಕುಶಾಲನಗರ ಆಸ್ಪತ್ರೆಗೆ ಗರ್ಭಿಣಿಯಾದ ಮಹಿಳೆ ರೇಣುಕಾ, ಆಕೆಯ ಪತಿ ಸೋಮಶೇಖರ್‍ನೊಂದಿಗೆ ಆಗಮಿಸಿದ ಪ್ರಖ್ಯಾತ್, ಹಣಕ್ಕಾಗಿ ಬೆದರಿಕೆ ಒಡ್ಡಿ ಗರ್ಭಿಣಿಯ ಮೇಲೆ ದೌರ್ಜನ್ಯ ಎಸಗಿರುವುದಾಗಿ ಆರೋಪಿಸಿ ಪ್ರಕರಣ ದಾಖಲಿಸುವುದಾಗಿಯೂ ಬೆದರಿಕೆ ಒಡ್ಡಿರುವುದಾಗಿ ಡಾ.ಚೇತನ್ ಅವರು ಎಸ್.ಪಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಎಸ್.ಪಿಗೆ ದೂರು ನೀಡುವ ಸಂದರ್ಭ ರಾಜ್ಯ ಸರಕಾರಿ ವೈದ್ಯಾಧಿಕಾರಿಗಳ ಸಂಘದ ಕೊಡಗು ಜಿಲ್ಲಾ ಅಧ್ಯಕ್ಷ ಡಾ.ಆನಂದ್, ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ. ಅರುಣ್ ಕುಮಾರ್ ಸೇರಿದಂತೆ 40ಕ್ಕೂ ಅಧಿಕ ವೈದ್ಯರು ಹಾಜರಿದ್ದರು.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾಹಿತಿ ನೀಡಿದ ಎಸ್.ಪಿ ಕೆ.ರಾಮರಾಜನ್ ಅವರು, ವೈದರಿಂದ ಏನಾದರು ತೊಂದರೆ ಆದಲ್ಲಿ ಪೊಲೀಸ್ ದೂರು ನೀಡಬೇಕೇ ಹೊರತು ಅವರಿಗೆ ಬೆದರಿಕೆ ನೀಡುವ ಕ್ರಮ ಸರಿಯಲ್ಲ. ದೂರು ನೀಡಿದಲ್ಲಿ ತನಿಖೆ ಕೈಗೊಂಡು ಸತ್ಯಾಸತ್ಯತೆ ಬಗ್ಗೆ ತಿಳಿದುಕೊಳ್ಳಲಾಗುತ್ತದೆ. ವೈದ್ಯರು ‘ಪಬ್ಲಿಕ್ ಸೆರ್ವೆಂಟ್’ ಆಗಿ ಕಾರ್ಯನಿರ್ವಹಿಸುತ್ತಾರೆ. ಅವರುಗಳ ಮೇಲೆ ಸುಳ್ಳು ಪ್ರಕರಣ ದಾಖಲಿಸುವ ಬೆದರಿಕೆ ಒಡ್ಡಿರುವುದರಿಂದ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೊಳ್ಳಲಾಗುವುದು ಎಂದರು.