ಭಾಗಮಂಡಲ, ನ. 20: ತುಲಾಸಂಕ್ರಮಣ ಪ್ರಯುಕ್ತ ಅಕ್ಟೋಬರ್ 16ರಂದು ಭಾಗಮಂಡಲ ದಿಂದ ತಲಕಾವೇರಿಗೆ ಕೊಂಡೊಯ್ದು ಕಾವೇರಿ ಮಾತೆಗೆ ತೊಡಿಸಿದ್ದ ಚಿನ್ನಾಭರಣಗಳನ್ನು ಗುರು ವಾರ ಶಾಸ್ರೋಕ್ತವಾಗಿ ತಂದು ದೇವಾಲಯದ ಆಡಳಿತಾಧಿಕಾರಿ ಚಂದ್ರಶೇಖರ್ ಅವರಿಗೆ ಹಸ್ತಾಂತರಿಸಲಾಯಿತು.

ಜಾತ್ರೆಯ ಅಂಗವಾಗಿ ತಲಕಾವೇರಿ ತಕ್ಕರಾದ ಕೋಡಿ ಮೋಟಯ್ಯ ಅವರು ಆಡಳಿತಾಧಿಕಾರಿ ಚಂದ್ರಶೇಖರ್ ಅವರಿಂದ ಆಭರಣಗಳನ್ನು ಪಡೆದು ತಲಕಾವೇರಿಗೆ ಕೊಂಡೊಯ್ದಿದ್ದರು. ಕಿರುಸಂಕ್ರಮಣದವರೆಗೆ ಕಾವೇರಿ ಕುಂಡಿಕೆಯಲ್ಲಿ ಆಭರಣ ಹಾಗೂ ಬೆಳ್ಳಿಯ ಕವಚಗಳನ್ನು ತೊಡಿಸಲಾಗಿತ್ತು. ಸಂಕ್ರಮಣ ಮುಗಿದ ಬಳಿಕ ಭಂಡಾರವನ್ನು ತರಲಾಯಿತು. ಚಿನ್ನಾಭರಣಗಳನ್ನು ಮರಳಿ ಆಡಳಿತಾಧಿಕಾರಿ ಚಂದ್ರಶೇಖರ್ ಅವರಿಗೆ ಹಸ್ತಾಂತರಿಸಲಾಯಿತು. ಜಾತ್ರೆಯ ಅಂಗವಾಗಿ ಭಾಗಮಂಡಲದಲ್ಲಿ ಒಂದು ತಿಂಗಳ ಕಾಲ ನಂದಾದೀಪವನ್ನು ಹಾಗೂ ಅಕ್ಷಯ ಪಾತ್ರೆಯನ್ನು ಇರಿಸಲಾಗಿದ್ದು, ಸಾಂಪ್ರದಾಯಿಕ ಆಚರಣೆ ಗುರುವಾರ ಸಮಾಪ್ತಿಗೊಂಡಿದೆ. - ಸುನಿಲ್