ಐಗೂರು, ನ. 20: ಐಗೂರಿನ ಗುಳಿಗಪ್ಪ ಸಮುದಾಯ ಭವನದಲ್ಲಿ ಐಗೂರು ವಲಯ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆ ವಲಯ ಅಧ್ಯಕ್ಷ ಕಡ್ಲೇರ ಹೊನ್ನಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು.
ಶಾಸಕ ಡಾ. ಮಂತರ್ ಗೌಡ ಸರ್ಕಾರದಿಂದ ಅನುದಾನ ತಂದು ಐಗೂರು, ಕಾಜೂರು ಮತ್ತು ಯಡವಾರೆ ವ್ಯಾಪ್ತಿಯಲ್ಲಿ ರಸ್ತೆ, ತಡೆಗೋಡೆಗಳ ಕಾಮಗಾರಿ, ಯಡವನಾಡಿನ ಕಿರು ಸೇತುವೆ ನಿರ್ಮಿಸಿದ್ದು ಅಭಿವೃದ್ಧಿಯ ಕಾಮಗಾರಿಗಳು ಉದ್ಘಾಟನೆ ಆಗಬೇಕಾಗಿದೆ ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್ ಕಾರ್ಯಕರ್ತರಿಗೆ ತಿಳಿಸಿದರು.
ಐಗೂರು ಗ್ರಾಮದಲ್ಲಿ ಸ್ವಂತ ಮನೆ, ನಿವೇಶನ ಇಲ್ಲದೆ ಬಾಡಿಗೆ ಮನೆಯಲ್ಲಿ ವಾಸಿಸುವವರಿಗೆ ಮನೆ, ನಿವೇಶನ, ಹಕ್ಕು ಪತ್ರ ಇಲ್ಲದವರಿಗೆ ಹಕ್ಕುಪತ್ರ ವಿತರಣೆಯಾಗಬೇಕು. ಕಾರ್ಯಕರ್ತರ ಸಮಸ್ಯೆಗೆ ಆಯಾ ಬೂತ್ ಮಟ್ಟದ ನಾಯಕರು ಸ್ಪಂದಿಸಿ ಶಾಸಕರ ಗಮನಕ್ಕ ತರಬೇಕಾಗಿದೆ ಎಂದು ಕರೆ ನೀಡಿದರು.
ನೆನೆಗುದಿಗೆ ಬಿದ್ದಿದ್ದ ಐಗೂರಿನ ಹಳೆಯ ಕಬ್ಬಿಣ ಸೇತುವೆಗೆ ಬದಲಾಗಿ ರೂ. 10 ಕೋಟಿ ಅಂದಾಜು ವೆಚ್ಚದ ನೂತನ ಸೇತುವೆಯ ಕಾಮಗಾರಿಯ ಕೆಲಸ ಪ್ರಾರಂಭವಾಗಿದ್ದು, ಅನುದಾನ ತಂದ ಶಾಸಕರ ಬಗ್ಗೆ ಶ್ಲಾಘನೆ ವ್ಯಕ್ತವಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಚಂಗಪ್ಪ, ಬಿ.ಬಿ. ಸತೀಶ್, ಕೆಡಿಪಿ ಸದಸ್ಯೆ ಸಬಿತಾ ಚೆನ್ನಕೇಶವ, ಎಸ್.ಎನ್. ಯೋಗೇಶ್, ವಿಶ್ವನಾಥ ರಾಜ ಅರಸ್, ಭರತ್ ಕುಮಾರ್, ಮಾಜಿ ಗ್ರಾ.ಪಂ. ಅಧ್ಯಕ್ಷ ರಮೇಶ್, ಉಪಾಧ್ಯಕ್ಷ ಗಣೇಶ್ ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.