ಸಿದ್ದಾಪುರ, ನ. ೧೯ : ಮೈಸೂರಿನಲ್ಲಿ ನೆಲೆಸಿದ್ದ ಹರಿಯಾಣ ರಾಜ್ಯದ ನಾನಕಿದೇವಿ ಎಂಬ ಮಹಿಳೆಯ ಮೃತದೇಹವನ್ನು ತಾ.೧೪ರಂದು ಮೈಸೂರಿನಿಂದ ಕೊಡಗಿಗೆ ಮೂವರು ಸಾಗಿಸುವಾಗ ಮಾಲ್ದಾರೆ ಗ್ರಾಮದ ಲಿಂಗಪುರ ಅರಣ್ಯ ಚೆಕ್ಪೋಸ್ಟ್ ಬಳಿ ಅರಣ್ಯ ಸಿಬ್ಬಂದಿಗಳು ಪತ್ತೆಹಚ್ಚಿ, ಮೂವರು ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದರು.
ಮೃತದೇಹಕ್ಕೆ ಅವಮಾನ ಮಾಡಿದ್ದಾರೆ ಎಂಬ ಆರೋಪದಡಿ ಮೂವರ ವಿರುದ್ಧ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದ್ದು, ಮೃತ ಮಹಿಳೆಯ ದೇಹವನ್ನು ಅವರ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. ಮಹಿಳೆಯು ತಾನು ನೆಲೆಸಿದ್ದ ಮೈಸೂರಿನ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡು ಮೃತರಾಗಿರುವುದಾಗಿ ತಿಳಿದುಬಂದಿದ್ದು, ಮೃತಪಟ್ಟ ಮಹಿಳೆಯ ಮರಣೋತ್ತರ ಪರೀಕ್ಷೆಯನ್ನು ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ನಡೆಸಿ ಮೃತ ದೇಹವನ್ನು ಹರಿಯಾಣದಿಂದ ಕೊಡಗು ಜಿಲ್ಲೆಗ ಆಗಮಿಸಿದ್ದ ಆಕೆಯ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.
ಘಟನೆಯ ವಿವರ : ಮೂಲತಃ ಹರಿಯಾಣ ರಾಜ್ಯದ ನಿವಾಸಿಗಳಾದ ರಾಕೇಶ್ ಕುಮಾರ್ ಮತ್ತು ಆತನ ಪತ್ನಿ ನಾನಕಿದೇವಿ ಹಾಗೂ ಈತನ ಸ್ನೇಹಿತರು ಮೈಸೂರಿನ ಮೇಟಗಳ್ಳಿ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡಿಕೊಂಡು ಕಾರ್ಪೆಂಟರ್ ಕೆಲಸ ಮಾಡುತ್ತಿದ್ದರು. ತಾ.೧೪ ರಂದು ಶುಕ್ರವಾರ ರಾಕೇಶ್ಕುಮಾರ್ ಮತ್ತು ಆತನ ಸ್ನೇಹಿತರು ಕೆಲಸಕ್ಕೆ ತೆರಳಿದ್ದರು. ರಾತ್ರಿ ಮನೆಗೆ ಹಿಂತಿರುಗಿ ಎಂಟು ಗಂಟೆ ಸಮಯಕ್ಕೆ ಮನೆಗೆ ಬಂದ ಸಂದರ್ಭದಲ್ಲಿ ಮನೆಯ ಬಾಗಿಲು ಮುಚ್ಚಿತ್ತು. ಈ ವೇಳೆ ರಾಕೇಶ್ ಕುಮಾರ್ ತನ್ನ ಪತ್ನಿ ನಾನಕ್ಕಿ ದೇವಿಯನ್ನು ಹಲವಾರು ಬಾರಿ ಕರೆದರೂ ಆಕೆ ಹೊರಬರಲಿಲ್ಲ. ಬಳಿಕ ರಾಕೇಶ್ಕುಮಾರ್ ಹಾಗೂ ಆತನ ಸ್ನೇಹಿತರಾದ ಸತ್ವೀರ್ ಮತ್ತು ವಿಕಾಸ್, ಮನೆ ಬಾಗಿಲು ತೆಗೆದು ಒಳ ನುಗ್ಗಿದರು. ಈ ಸಂದರ್ಭದಲ್ಲಿ ನಾನಕಿ ದೇವಿ ಮನೆಯ ಕೋಣೆ ಒಳಗೆ ನೇಣು ಬಿಗಿದ ಸ್ಥಿತಿಯಲ್ಲಿದ್ದಳು ಎನ್ನಲಾಗಿದೆ.
ಆಕೆಯನ್ನು ಈ ಮೂವರು ಸೇರಿ ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಮಾರ್ಗ ಮಧ್ಯೆ ನಾನಕಿದೇವಿ ಸಾವನ್ನಪ್ಪಿದಳು ಎನ್ನಲಾಗಿದ್ದು, ಇದರಿಂದಾಗಿ ಗಾಬರಿಗೊಂಡ ಪತಿ ರಾಕೇಶ್ ಕುಮಾರ್ ಹಾಗೂ ಆತನ ಸ್ನೇಹಿತರು ಏನು ಮಾಡಬೇಕೆಂದು ತಿಳಿಯದೆ ಕಾರಿನಲ್ಲಿ ಮೈಸೂರಿನಿಂದ ಮಹಿಳೆಯ ಮೃತ ದೇಹವನ್ನು ಕೊಡಗು ಜಿಲ್ಲೆಗೆ ತರುತ್ತಿದ್ದ ಸಂದರ್ಭ ಮಾಲ್ದಾರೆ ಗ್ರಾಮದ ಲಿಂಗಪುರ ಅರಣ್ಯ ಚೆಕ್ ಪೋಸ್ಟ್ ಬಳಿ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಸಿಕ್ಕಿ ಬಿದ್ದರು.
ಕೂಡಲೆ ಸಿದ್ದಾಪುರ ಪೊಲೀಸರಿಗೆ ಅರಣ್ಯ ಇಲಾಖಾ ಸಿಬ್ಬಂದಿಗಳು ಮಾಹಿತಿ ನೀಡಿದ ಮೇರೆಗೆ ಸಿದ್ದಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೂವರನ್ನು ವಶಕ್ಕೆ ಪಡೆದುಕೊಂಡರು. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಸಂಶಯಾಸ್ಪದ ಸಾವಿನ ಪ್ರಕರಣವನ್ನು ದಾಖಲಿಸಿಕೊಂಡು ಮೃತ ಮಹಿಳೆ ನಾನಕಿದೇವಿಯ ಮೃತದೇಹವನ್ನು ತನಿಖೆ ನಡೆಸುವ ನಿಟ್ಟಿನಲ್ಲಿ ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಇರಿಸಲಾಯಿತು. ಮೇಲ್ನೋಟಕ್ಕೆ ನಾನಕಿದೇವಿ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ. ಆದರೆ ಮೃತ ದೇಹಕ್ಕೆ ಅವಮಾನ ಮಾಡಿದ್ದಾರೆ ಎಂಬ ಆರೋಪದ ಅಡಿಯಲ್ಲಿ ಸಿದ್ದಾಪುರ ಪೊಲೀಸರು ಮೃತಳ ಪತಿ ರಾಕೇಶ್ ಕುಮಾರ್ ಹಾಗೂ ಅವನ ಸ್ನೇಹಿತರುಗಳಾದ ಸತ್ವೀರ್, ವಿಕಾಸ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ತಾ.೧೮ರ ರಾತ್ರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾರ್ಗದರ್ಶನದಲ್ಲಿ ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ಮತ್ತು ಪೊಲೀಸ್ ಸಿಬ್ಬಂದಿಗಳು ಮಡಿಕೇರಿಗೆ ತೆರಳಿದ್ದು, ಇವರುಗಳ ಸಮ್ಮುಖದಲ್ಲಿಯೇ ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ನಾನಕಿ ದೇವಿಯ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಬಳಿಕ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು.