ಪಾಲಿಬೆಟ್ಟ, ನ. ೧೮ : ‘ದಿ ಕೂರ್ಗ್ ವೆಲ್‌ನೆಸ್ ಫೌಂಢೆಶನ್’ ಹಾಗೂ ಖ್ಯಾತ ನಟ ಮಿಲಿಂಡ್ ಸೋಮನ್ ಆಯೋಜಿತ ಪ್ರಖ್ಯಾತ ಬರಿಗಾಲು ಮ್ಯಾರಥಾನ್‌ನ ೯ನೇ ಆವೃತ್ತಿಗೆ ಈ ಬಾರಿ ಡಿಸೆಂಬರ್ ೭ ರಂದು ಪಾಲಿಬೆಟ್ಟದ ಟಾಟಾ ಕಾಫಿ ಸ್ಪೋರ್ಟ್ಸ್ ಮೈದಾನದಲ್ಲಿ ಚಾಲನೆ ದೊರಕಲಿದೆ ಎಂದು ಫೌಂಡೇಶನ್‌ನ ಸ್ಥಾಪಕಿ ಚೆಪ್ಪುಡೀರ ನಿಕ್ಕಿ ಪೊನ್ನಪ್ಪ ಅವರು ಮಾಹಿತಿ ನೀಡಿದ್ದಾರೆ.

ಕೊಡಗಿನ ವನ್ಯಜೀವಿ, ಜನ ಹಾಗೂ ಪರಿಸರದ ರಕ್ಷಣೆಗೆ ಕೂರ್ಗ್ ವೆಲ್‌ನೆಸ್ ಫೌಂಡೇಶನ್ ಹಲವಾರು ಕಾರ್ಯಗಳನ್ನು ನೆರವೇರಿಸುತ್ತಿದ್ದು, ಮ್ಯಾರಥಾನ್‌ನಲ್ಲಿ ಭಾಗಿಯಾಗುವವರು ನೀಡುವ ನೋಂದಣಿ ಶುಲ್ಕದ ಮೊತ್ತ ಈ ಸಾಮಾಜಿಕ ಕಾರ್ಯಗಳಿಗೆ ಬಳಕೆಯಾಗಲಿದೆ. ಪ್ಲಾಸ್ಟಿಕ್ ಮುಕ್ತ ಕಾರ್ಯಕ್ರಮ ಇದಾಗಿದ್ದು, ನೀರನ್ನೂ ಕೂಡ ಕಳೆದ ೮ ಆವೃತ್ತಿಗಳ ಮ್ಯಾರಥಾನ್ ಓಟದ ಸಂದರ್ಭ ತೆಂಗಿನ ಚಿಪ್ಪಿನಲ್ಲಿಯೇ ನೀಡುವ ಅಭ್ಯಾಸವನ್ನು ಆಯೋಜಕರು ಪಾಲಿಸುತ್ತಾ ಬಂದಿದ್ದಾರೆ. ನಟ ಹಾಗೂ ‘ಪಿಟ್‌ನೆಸ್’ ಬಗ್ಗೆ ಉತ್ಸಾಹ ಹೊಂದಿರುವ ಮಿಲಿಂಡ್ ಸೋಮನ್ ಅವರುಗಳು ಕೂಡ ಇದರಲ್ಲಿ ನಿರಂತರವಾಗಿ ಭಾಗಿಯಾಗುತ್ತಿದ್ದಾರೆ.

ಬರಿಗಾಲಿನಲ್ಲಿ ಓಡುವುದರಿದ ಆರೋಗ್ಯಕ್ಕೆ ಒಳಿತಾಗುವುದಲ್ಲದೇ ಪ್ರಕೃತಿಯೊಂದಿಗೆ ಬೆರೆತು ಒಂದಾಗಲೂ ಅವಕಾಶ ಸಿಗಲಿದೆ ಎಂಬ ನಂಬಿಕೆಯಲ್ಲಿ ಕೂರ್ಗ್ ವೆಲ್‌ನೆಸ್ ಫೌಂಡೇಶನ್ ವಾರ್ಷಿಕ ಈ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದೆ. ಹೊರ ಜಿಲ್ಲೆ, ಹೊರ ರಾಜ್ಯ ಮಾತ್ರವಲ್ಲದೆ ವಿದೇಶದಿಂದಲೂ ಸ್ಪರ್ಧಿಗಳು ಆಗಮಸಿ ಬರಿಗಾಲು ಮ್ಯಾರಥಾನ್‌ನಲ್ಲಿ ಭಾಗವಹಿಸುತ್ತಾರೆ.

ಭಾಗವಹಿಸಲು ನೋಂದಣಿ ಮಾಡಿಕೊಳ್ಳಿ

ಈ ಬಾರಿಯ ಬರಿಗಾಲು ಮ್ಯಾರಥಾನ್‌ನಲ್ಲಿ ಭಾಗವಹಿಸಲು ಆಸಕ್ತರು hಣಣಠಿs://ಡಿಚಿಛಿesಡಿegisಣಡಿಚಿಣioಟಿs.ಛಿom/e/ಖಿhe ಃಚಿಡಿeಜಿooಣ ಒಚಿಡಿಚಿಣhoಟಿ- ೨೦೨೫ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ.

೬೫ ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಪ್ರಥಮ ಬಂದವರಿಗೆ ರೂ. ೧೫,೦೦೦, ದ್ವಿತೀಯ ಬಹುಮಾನವಾಗಿ ರೂ. ೫,೦೦೦ ನೀಡಲಾಗುವುದು.

ಉಳಿದಂತೆ ಫುಲ್ ಮ್ಯಾರಥಾನ್ (೪೨ ಕಿ.ಮೀ ಓಟ)ನಲ್ಲಿ ಪ್ರತ್ಯೇಕವಾಗಿ ಮಹಿಳೆ ಹಾಗೂ ಪುರುಷರಿಗೆ ನಡೆಯುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ರೂ. ೨೭,೦೦೦, ದ್ವಿತೀಯ ರೂ. ೧೮,೦೦೦ ನೀಡಲಾಗುವುದು.

ಹಾಫ್ ಮ್ಯಾರಥಾನ್‌ನಲ್ಲಿ ಪ್ರತ್ಯೇಕವಾಗಿ ಮಹಿಳೆ ಹಾಗೂ ಪುರುಷರಿಗೆ ನಡೆಯುವ ಸ್ಪರ್ಧೆಯಲ್ಲಿ ಪ್ರಥಮ ರೂ. ೧೨,೬೦೦, ದ್ವಿತೀಯ ರೂ. ೮,೪೦೦ ನೀಡಲಾಗುವುದು.

೧೦ ಕಿ.ಮೀ. ಓಟದಲ್ಲಿ ಪ್ರತ್ಯೇಕವಾಗಿ ಮಹಿಳೆ ಹಾಗೂ ಪುರುಷರಿಗೆ ಪ್ರಥಮ ರೂ. ೬,೦೦೦, ದ್ವಿತೀಯ ರೂ. ೪,೦೦೦ ಹಾಗೂ ೫ ಕಿ.ಮೀ ಓಟದಲ್ಲಿ ಪ್ರತ್ಯೇಕವಾಗಿ ಮಹಿಳೆ ಹಾಗೂ ಪುರುಷರಿಗೆ ಪ್ರಥಮ ರೂ. ೩,೦೦೦, ದ್ವಿತೀಯ ರೂ. ೨,೦೦೦ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ೯೮೪೫೫೫೯೪೫೨ ಅನ್ನು ಸಂಪರ್ಕಿಸಬಹುದಾಗಿದೆ.