ಮಡಿಕೇರಿ, ನ. ೧೮: ಕಲೆ, ಸಾಹಿತ್ಯದ ಬಗ್ಗೆ ಮಕ್ಕಳಲ್ಲಿ ಅಭಿರುಚಿ ಹೆಚ್ಚಿಸಬೇಕು ಮತ್ತು ಪರಿಸರದ ಕುರಿತು ಜಾಗೃತಿ ಮೂಡಿಸಬೇಕು ಎಂದು ಕಿರಿಕೊಡ್ಲಿ ಮಠದ ಪೀಠಾಧ್ಯಕ್ಷರಾದ ಶ್ರೀ ಸದಾಶಿವ ಸ್ವಾಮಿ ಕರೆ ನೀಡಿದ್ದಾರೆ.

ಮಡಿಕೇರಿ ನಗರದ ಮಹದೇವಪೇಟೆಯ ಎಸ್.ಎಸ್. ಆಸ್ಪತ್ರೆ ಮತ್ತು ಆರ್.ಕೆ. ಲ್ಯಾಬ್ ವತಿಯಿಂದ ವಿದ್ಯಾರ್ಥಿಗಳಿಗಾಗಿ ೩ನೇ ವರ್ಷದ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆ ೩ ವಿಭಾಗಗಳಲ್ಲಿ ನಡೆಯಿತು.

ಎಎಲ್‌ಜಿ ಕ್ರೆಸೆಂಟ್ ಶಾಲೆಯಲ್ಲಿ ನಡೆದ ಸ್ಪರ್ಧೆಯ ಸಮಾರೋಪ ಮತ್ತು ಬಹುಮಾನ ವಿತರಣಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಸ್ವಾಮೀಜಿ, ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಇಂತಹ ಕಾರ್ಯಚಟುವಟಿಕೆಗಳಿಂದ ಮಕ್ಕಳಲ್ಲಿ ಕಲೆ ಮತ್ತು ಸಾಹಿತ್ಯದ ಬಗ್ಗೆ ಅಭಿರುಚಿ ಹೆಚ್ಚಾಗುತ್ತದೆ, ಅಲ್ಲದೆ ಪ್ರಕೃತಿಯ ಮೇಲೆ ಪ್ರೀತಿ ಮೂಡುತ್ತದೆ ಎಂದರು.

ದಿನದಿಂದ ದಿನಕ್ಕೆ ಪ್ರಕೃತಿಯಲ್ಲಿ ಬದಲಾವಣೆಯನ್ನು ಕಾಣುತ್ತಿದ್ದೇವೆ, ಅದೇ ರೀತಿ ನಮ್ಮ ಜೀವನ ಶೈಲಿಯೂ ಬದಲಾವಣೆಯಾಗುತ್ತಿದೆ. ಅದು ಸಹಜ ಪ್ರಕ್ರಿಯೆ, ಆದರೆ ಬದಲಾವಣೆಗಳು ಮಾದರಿಯುಕ್ತವಾದಾಗ ಮಾತ್ರ ಒಂದು ಉತ್ತಮ ಸಮಾಜದ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ನಾವು ಪಡೆದ ಶಿಕ್ಷಣದಿಂದ ಸಮಾಜದಲ್ಲಿ ಉತ್ತಮ ಬದಲಾವಣೆಗಳಾಗಬೇಕು ಮತ್ತು ಸಾಮಾಜಿಕ ಸುಧಾರಣೆಗಳಾಗಬೇಕು ಎಂದು ಶ್ರೀಸದಾಶಿವ ಸ್ವಾಮಿಗಳು ಹೇಳಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ನಗರಸಭಾ ಅಧ್ಯಕ್ಷೆ ಪಿ. ಕಲಾವತಿ ಅವರು ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸಲು ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ. ಮುಂದೆಯೂ ಉತ್ತಮ ಕಾರ್ಯಕ್ರಮಗಳನ್ನು ನಡೆಸಿದರೆ ಅಗತ್ಯ ಸಹಕಾರ ನೀಡುವುದಾಗಿ ಹೇಳಿದರು.

ಎಸ್‌ಎಸ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕಿ ಡಾ. ಶಿಲ್ಪಾ ಸತೀಶ್ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಪ್ರೋತ್ಸಾಹಿಸಲು ಪ್ರತಿವರ್ಷ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ.

ಇನ್ನು ಮುಂದೆಯೂ ವೈವಿಧ್ಯಮಯ ಕಾರ್ಯ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಲಾಗುವುದು ಎಂದರು.

ಪೋಷಕರು ಹಾಗೂ ವಿದ್ಯಾರ್ಥಿಗಳು ನಿರಂತರವಾಗಿ ನಮ್ಮ ಕಾರ್ಯಕ್ರಮಕ್ಕೆ ಸಹಕಾರ ನೀಡುತ್ತಿದ್ದಾರೆ. ಅಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ನಮ್ಮ ಮುಂದಿನ ಯೋಜನೆಗಳಿಗೆ ಸ್ಫೂರ್ತಿ ತುಂಬುತ್ತಿದ್ದಾರೆ. ಇವರೆಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಉಪಾಧ್ಯಕ್ಷ ಮಹೇಶ್ ಜೈನಿ, ಮಾಜಿ ಅಧ್ಯಕ್ಷ ಹೆಚ್.ಎಂ. ನಂದಕುಮಾರ್, ಹಿರಿಯ ವೈದ್ಯ ಡಾ. ಹೆಚ್.ವಿ. ದೇವದಾಸ್, ಕಾರ್ಯನಿರ್ವಾಹಕ ವ್ಯವಸ್ಥಾಪಕ ಡಾ. ಸತೀಶ್, ಕ್ರೆಸೆಂಟ್ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಮೊಹಮ್ಮದ್ ಹನೀಫ್ ಹಾಗೂ ಆರ್.ಕೆ. ಲ್ಯಾಬ್‌ನ ನಿರ್ದೇಶಕ ಪ್ರದೀಪ್ ಮತ್ತಿತರರು ಉಪಸ್ಥಿತರಿದ್ದರು.

ಮೊದಲನೇ ವಿಭಾಗ: ಎಲ್‌ಕೆಜಿ ಯಿಂದ ೧ನೇ ತರಗತಿವರೆಗಿನ ವಿದ್ಯಾರ್ಥಿಗಳಿಗಾಗಿ ನಡೆದ ಸ್ಪರ್ಧೆ. ‘ವಿಷಯ : ನಮ್ಮ ಶಾಲೆಯ ಆಟದ ಮೈದಾನ’. ಪ್ರಥಮ ಬಹುಮಾನ ಮಡಿಕೇರಿಯ ಯುರೋ ಕಿಡ್ಸ್ ಶಾಲೆಯ ಯುಕೆಜಿ ವಿದ್ಯಾರ್ಥಿನಿ ಜಾಗೃತಿ ಎ. (ರೂ. ೨,೦೦೦), ದ್ವಿತೀಯ ಸಂತ ಜೋಸೆಫರ ಶಾಲೆಯ ೧ನೇ ತರಗತಿಯ ವಿದ್ಯಾರ್ಥಿನಿ ಬ್ರಿಯಾ ಕೆ.ಪಿ. (ರೂ. ೧,೫೦೦), ತೃತೀಯ ಬಹುಮಾನ ಸಂತ ಜೋಸೆಫರ ಶಾಲೆಯ ೧ನೇ ತರಗತಿಯ ವಿದ್ಯಾರ್ಥಿ ಜಗನ್ ರಾವ್ ಎಂ.ಸಿ (ರೂ. ೧,೦೦೦). ೨ನೇ ವಿಭಾಗ: ೨ನೇ ತರಗತಿಯಿಂದ ೬ನೇ ತರಗತಿವರೆಗಿನ ವಿದ್ಯಾರ್ಥಿಗಳಿಗಾಗಿ ನಡೆದ ಸ್ಪರ್ಧೆ. ‘ವಿಷಯ : ಮಳೆಗಾಲದಲ್ಲಿ ಕೊಡಗು’ ಪ್ರಥಮ ಬಹುಮಾನ ಸಂತ ಜೋಸೆಫರ ಶಾಲೆಯ ೫ನೇ ತರಗತಿಯ ವಿದ್ಯಾರ್ಥಿನಿ ರಚಿತ ವೈ.ಹೆಚ್. (ರೂ. ೩,೫೦೦), ದ್ವಿತೀಯ ಬಹುಮಾನ ಸಂತ ಮೈಕಲರ ಶಾಲೆಯ ೫ನೇ ತರಗತಿಯ ವಿದ್ಯಾರ್ಥಿನಿ ತುಷಿಕಾ (ರೂ. ೩,೦೦೦), ತೃತೀಯ ಬಹುಮಾನ ಸಂತ ಜೋಸೆಫರ ಶಾಲೆಯ ೪ನೇ ತರಗತಿಯ ವಿದ್ಯಾರ್ಥಿನಿ ಶಿವಾನಿ ಎಂ.ಬಿ. (ರೂ. ೨,೫೦೦).

೩ನೇ ವಿಭಾಗ: ೭ನೇ ತರಗತಿಯಿಂದ ೧೦ನೇ ತರಗತಿವರೆಗಿನ ವಿದ್ಯಾರ್ಥಿಗಳಿಗಾಗಿ ನಡೆದ ಸ್ಪರ್ಧೆ. ‘ವಿಷಯ : ನೀರಿಗಾಗಿ ಹಾಹಾಕಾರ’ ಪ್ರಥಮ ಬಹುಮಾನ ಸಂತ ಮೈಕಲರ ಶಾಲೆಯ ೮ನೇ ತರಗತಿ ವಿದ್ಯಾರ್ಥಿ ಪಿ.ಎನ್. ಸಚಿನ್ (ರೂ. ೫,೦೦೦), ದ್ವಿತೀಯ ಬಹುಮಾನ ಸಂತ ಜೋಸೆಫರ ಶಾಲೆಯ ೧೦ನೇ ತರಗತಿ ವಿದ್ಯಾರ್ಥಿ ಹರ್ಷಿತ್ ಪೊನ್ನಪ್ಪ (ರೂ. ೪,೫೦೦), ತೃತೀಯ ಬಹುಮಾನ ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್‌ನ ೯ನೇ ತರಗತಿಯ ವಿದ್ಯಾರ್ಥಿ ಮೋಹಿತ್ ಟಿ.ಎಸ್. (ರೂ. ೪,೦೦೦) ಪಡೆದುಕೊಂಡರು.

ಎಲ್ಲಾ ವಿಜೇತರಿಗೆ ನಗದು ಬಹುಮಾನ ಮತ್ತು ಆಕರ್ಷಕ ಟ್ರೋಫಿಯನ್ನು ನೀಡಲಾಯಿತು. ತೀರ್ಪುಗಾರರಾಗಿ ರಾಷ್ಟç ಪ್ರಶಸ್ತಿ ವಿಜೇತ ಚಿತ್ರ ಕಲಾವಿದೆ ಅಕ್ಷತಾ ಕಾರ್ಯನಿರ್ವಹಿಸಿದರು.