ಸಿದ್ದಾಪುರ, ನ.೧೮ : ಗ್ರಾಮ ಪಂಚಾಯಿತಿಯ ನೌಕರ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿಯನ್ನು ಬೇನಾಮಿ ಹೆಸರಿನಲ್ಲಿ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮ ಪಂಚಾಯಿತಿ ಸದಸ್ಯರೇ ಆಕ್ಷೇಪ ವ್ಯಕ್ತಪಡಿಸಿರುವ ಘಟನೆ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಡಿಕೇರಿ ರಸ್ತೆಯಲ್ಲಿ ನಡೆದಿದೆ.
ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕರಡಿ ಗೋಡು ಗ್ರಾಮದ ಮಡಿಕೇರಿ ರಸ್ತೆಯಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಅಧಿಕೃತವಾಗಿ ಕಾಮಗಾರಿಯ ಆದೇಶವನ್ನು ಪಡೆಯದೆ ಸಿದ್ದಾಪುರದ ಮಡಿಕೇರಿ ರಸ್ತೆಯಿಂದ ಕೂಡುಗದ್ದೆಯವರೆಗೆ ಕಾಮಗಾರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಗ್ರಾಮ ಪಂಚಾಯತ್ ಸದಸ್ಯ ಜಾಫರ್ ಆಲಿ ಕಾಮಗಾರಿ ನಡೆಸುತ್ತಿದ್ದ ಗ್ರಾಮ ಪಂಚಾಯಿತಿ ನೀರುಘಂಟಿಯ ಬಳಿ ಪ್ರಶ್ನಿಸಿ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ ಕಾಮಗಾರಿ ನಡೆಸುತ್ತಿದ್ದ ಸ್ಥಳದಲ್ಲಿ ರಸ್ತೆಗೆ ಅಡ್ಡಲಾಗಿ ಲೋಕೋಪಯೋಗಿ ಇಲಾಖೆಯಿಂದ ಅನುಮತಿ ಪಡೆಯದೆ ಗುಂಡಿ ತೆಗೆದಿರುವುದನ್ನು ವಿಚಾರಿಸಿ ಕಾಮಗಾರಿ ನಡೆಸುತ್ತಿದ್ದ ನೌಕರನನ್ನು ತರಾಟೆಗೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿದರು. ಈ ನೌಕರನ ವಿರುದ್ಧ ಹಲವಾರು ಆರೋಪಗಳು ಈ ಹಿಂದಿನಿAದಲೂ ಇದ್ದು ಇದೀಗ ಮತ್ತೆ ಅದೇ ವ್ಯಕ್ತಿ ಅಂದಾಜು ರೂ. ೩ ಲಕ್ಷ ರೂಪಾಯಿ ವೆಚ್ಚದ ಕಾಮಗಾರಿ ನಡೆಸುತ್ತಿದ್ದಾರೆ ಎಂದು ಜಾಫರ್ ಆಲಿ ದೂರಿದರು. ಕಾಮಗಾರಿಗೆ ಬಳಸುತ್ತಿರುವ ಪೈಪುಗಳ ಗುಣಮಟ್ಟವು ಕೂಡ ಕಳಪೆಯಿಂದ ಕೂಡಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವೀರಾಜಪೇಟೆ ತಾಲೂಕು ಕಾರ್ಯ ನಿರ್ವಹಣಾಧಿಕಾರಿಗೆ ದೂರು ನೀಡಿದ್ದಾರೆ.
ರಸ್ತೆ ಮಧ್ಯೆ ಗುಂಡಿ..!
ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರ ಏಕಾಏಕಿ ೧೧ ಗಂಟೆ ಸಮಯಕ್ಕೆ ಜೆಸಿಬಿ ಯಂತ್ರದ ಮೂಲಕ ರಸ್ತೆಯ ಮಧ್ಯಭಾಗದಿಂದ ನೀರು ಸಂಪರ್ಕದ ಪೈಪು ಜೋಡಣೆಗೆ ರಸ್ತೆಯನ್ನು ಅಗೆದು ಗುಂಡಿ ತೆಗೆದರು. ಈ ಸಂದರ್ಭದಲ್ಲಿ ಸಿದ್ದಾಪುರದಿಂದ ಮಡಿಕೇರಿ ರಸ್ತೆಯ ಮೂಲಕ ತೆರಳುವ ವಾಹನಗಳು ಹಾಗೂ ನೆಲ್ಲಿ ಹುದಿಕೇರಿ ಭಾಗದಿಂದ ಸಿದ್ದಾಪುರ ದತ್ತ ತೆರಳುವ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು. ವಾಹನಗಳು ಸರದಿ ಸಾಲಿನಲ್ಲಿ ಕೆಲಕಾಲ ನಿಂತು ಮತ್ತೆ ತೆರಳಿದವು.
ಮುಖ್ಯರಸ್ತೆಯಲ್ಲಿ ಅನುಮತಿ ಪಡೆಯದೆ ಗುಂಡಿ ತೆಗೆದ ಹಿನ್ನೆಲೆಯಲ್ಲಿ ಸಾರ್ವಜನಿಕರು ಲೋಕೋಪಯೋಗಿ ಇಲಾಖೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ವೀರಾಜಪೇಟೆ ತಾಲೂಕಿನ ಲೋಕೋಪಯೋಗಿ ಇಲಾಖೆಯ ಜೂನಿಯರ್ ಇಂಜಿನಿಯರ್ ಪುನೀತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಗ್ರಾಮ ಪಂಚಾಯಿತಿ ಸದಸ್ಯರುಗಳ ಬಳಿ ಮಾಹಿತಿ ಪಡೆದುಕೊಂಡರು. ಈ ಕಾಮಗಾರಿಯು ಕೊಣನೂರು- ಮಾಕುಟ್ಟ ರಾಜ್ಯ ಹೆದ್ದಾರಿಯ ಬಳಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ರಸ್ತೆ ಅಗಲೀಕರಣ ಸಂದರ್ಭದಲ್ಲಿ ಇದೀಗ ಕೈಗೊಂಡಿರುವ ಕಾಮಗಾರಿಯು ನಿಷ್ಪçಯೋಜಕವಾಗುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಕಾಮಗಾರಿಯ ಬದಲು ಕೂಡುಗದ್ದೆಯ ನಿವಾಸಿಗಳ ಕುಡಿಯುವ ನೀರಿನ ಸಮಸ್ಯೆಗಳಿಗೆ ಅದೇ ಜಾಗದಲ್ಲಿ ಕೊಳವೆ ಬಾವಿತೆಗೆದು ಅಲ್ಲಿ ಪೈಪ್ ಲೈನ್ ಅಳವಡಿಸಿದರೆ ಕಡಿಮೆ ಮೊತ್ತದಲ್ಲಿ ಕಾಮಗಾರಿ ಮುಕ್ತಾಯಗೊಳ್ಳುತ್ತಿತ್ತು ಎಂದು ಸ್ಥಳೀಯರು ಹೇಳಿದರು. ಇಷ್ಟೊಂದು ಮೊತ್ತದಲ್ಲಿ ಪೈಪ್‌ಲೈನ್ ಜೋಡಣೆ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.ಈ ಬಗ್ಗೆ ಮೇಲಾಧಿಕಾರಿಗಳು ಪರಿಶೀಲಿನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.