ಸೋಮವಾರಪೇಟೆ, ನ. ೧೮: ಮಡಿಕೇರಿ ಕ್ಷೇತ್ರದಲ್ಲಿ ಫ್ಲೆಕ್ಸ್ ರಾಜಕೀಯ ಬಿಟ್ಟು, ಅಭಿವೃದ್ಧಿಗೆ ಆದ್ಯತೆ ನೀಡಿ. ರೂ. ೧,೮೦೦ ಕೋಟಿ ಅನುದಾನ ಬಂದಿದೆ ಎನ್ನುವ ಕಾಂಗ್ರೆಸ್ ಕಾರ್ಯಕರ್ತರು ಈ ಬಗ್ಗೆ ಶ್ವೇತಪತ್ರ ಹೊರಡಿಸಿ. ರೈತರಿಗೆ ಮುಳುವಾಗುತ್ತಿರುವ ಸಿ ಮತ್ತು ಡಿ ಜಾಗ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಿರಿ. ಕೇಂದ್ರ ಸರ್ಕಾರದ ಅನುದಾನವನ್ನು ತಮ್ಮದೆಂದು ಬಿಂಬಿಸಿಕೊಳ್ಳುವ ಯತ್ನವನ್ನು ಕೈಬಿಡಿ ಎಂದು ಮಂಡಲ ಬಿಜೆಪಿ ತಿರುಗೇಟು ನೀಡಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಮಂಡಲ ಬಿಜೆಪಿ ಅಧ್ಯಕ್ಷ ಗೌತಮ್ ಗೌಡ, ಫ್ಲೆಕ್ಸ್ ವಿಚಾರದ ಬಗ್ಗೆ ಬಿಜೆಪಿ ಹೇಳಿಕೆಗೆ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಸೇರಿದಂತೆ ಇತರರು, ಮಂತರ್ ಗೌಡ ಅವರ ಗಮನಕ್ಕೆ ಬಾರದೇ ಅಭಿಮಾನಿಗಳು ಫ್ಲೆಕ್ಸ್ ಅಳವಡಿಸಿರಬಹುದು ಎಂದು ನೀಡಿರುವ ಪ್ರತಿಕ್ರಿಯೆ ಹಾಸ್ಯಾಸ್ಪದವಾಗಿದೆ. ಅಳವಡಿಸುವ ಸಂದರ್ಭ ಶಾಸಕರ ಗಮನಕ್ಕೆ ಬಾರದಿದ್ದರೂ ರಸ್ತೆಯಲ್ಲಿ ಸಂಚರಿಸುವಾಗ ಗಮನಿಸಿಲ್ಲವೇ? ಕಾರ್ಯಕ್ರಮ ಮುಗಿದ ನಂತರವಾದರೂ ಅಭಿಮಾನಿಗಳಿಗೆ ಹೇಳಿ ತೆಗೆಸಬಹುದಿತ್ತು. ಇವರ ಮಾತನ್ನು ಅಭಿಮಾನಿಗಳು ಕೇಳುವುದಿಲ್ಲವೇ? ಎಂದು ಪ್ರಶ್ನಿಸಿದರು.

ಕ್ಷೇತ್ರದ ಅಭಿವೃದ್ಧಿಗೆ ರೂ. ೧,೮೦೦ ಕೋಟಿ ಅನುದಾನವನ್ನು ಶಾಸಕರು ತಂದಿದ್ದಾರೆ ಎಂದು ಕಾಂಗ್ರೆಸ್ ಹೇಳಿಕೆ ನೀಡಿದ್ದು, ಈ ಬಗ್ಗೆ ಕಾಂಗ್ರೆಸ್ ಶ್ವೇತ ಪತ್ರ ಹೊರಡಿಸಲಿ. ಎನ್‌ಡಿಆರ್‌ಎಫ್, ಕೇಂದ್ರ ಸರ್ಕಾರದ ಯೋಜನೆಗಳ ಅನುದಾನಕ್ಕೆ ಶಾಸಕರು ಭೂಮಿಪೂಜೆ ನಡೆಸುತ್ತಿದ್ದಾರೆ. ಈಗಾಗಲೇ ರೂ. ೯೦೦ ಕೋಟಿ ಅನುದಾನದಲ್ಲಿ ಯಾವ ಕೆಲಸ ಆಗಿದೆ? ಉಳಿದ ರೂ. ೯೦೦ ಕೋಟಿ ಅನುದಾನದ ಕ್ರಿಯಾಯೋಜನೆ ಯಾವುದು? ಎಂಬ ಬಗ್ಗೆಯೂ ತಿಳಿಸಲಿ. ಈ ಅನುದಾನ ಸಾರ್ವಜನಿಕ ಉಪಯೋಗಕ್ಕೆ ಬಳಕೆಯಾಗುತ್ತಿದೆಯೇ ಇಲ್ಲವೇ? ಎಂಬುದೂ ಬಹಿರಂಗವಾಗಲಿ ಎಂದು ಸವಾಲು ಹಾಕಿದರು.

ಯುವ ಮೋರ್ಚಾ ಅಧ್ಯಕ್ಷ ಮಹೇಶ್ ತಿಮ್ಮಯ್ಯ ಮಾತನಾಡಿ, ಕೇಂದ್ರ ಬಿಜೆಪಿ ಸರ್ಕಾರದ ಎನ್‌ಡಿಆರ್‌ಎಫ್ ಮೂಲಕ ಮಳೆಹಾನಿ ಪರಿಹಾರ ನಿಧಿಗೆ ಜಿ.ಪಂ.ಗೆ ರೂ. ೧೪ ಕೋಟಿ ಬಿಡುಗಡೆಯಾಗಿದ್ದು, ಈಗಾಗಲೇ ರೂ. ೧೧ ಕೋಟಿ ಜಿ.ಪಂ. ಖಾತೆಯಲ್ಲಿದೆ. ಮಡಿಕೇರಿ ನಗರಸಭೆಗೆ ರೂ. ೩೦ ಲಕ್ಷ, ಕುಶಾಲನಗರಕ್ಕೆ ರೂ. ೧೦ ಲಕ್ಷ, ವೀರಾಜಪೇಟೆಗೆ ರೂ. ೧೨, ಸೋಮವಾರಪೇಟೆಗೆ ರೂ. ೭ ಲಕ್ಷ ಬಿಡುಗಡೆಯಾಗಿದೆ. ಲೋಕೋಪಯೋಗಿ ಇಲಾಖೆಗೆ ರೂ. ೨.೧೧ ಕೋಟಿ ನೀಡಲಾಗಿದೆ. ಇದು ಕೇಂದ್ರದ ಬಿಜೆಪಿ ಸರ್ಕಾರ ಕ್ಷೇತ್ರಕ್ಕೆ ನೀಡಿರುವ ಅನುದಾನ ಎಂದರು.

ಇದರೊAದಿಗೆೆ ಸೆಸ್ಕ್ಗೆ ಸಂಬAಧಿಸಿದAತೆ ೩,೧೩೭ ವಿದ್ಯುತ್ ಕಂಬಗಳ ದುರಸ್ತಿಗೆ ಎನ್‌ಡಿಆರ್‌ಎಫ್ ಮೂಲಕ ರೂ. ೧.೫೨ ಕೋಟಿ ಅನುದಾನ ಒದಗಿಸಲಾಗಿದೆ. ಕಳೆದ ಅವಧಿಯ ಬಿಜೆಪಿ ಸರ್ಕಾರದ ಮೂಲಕ ಚೌಡ್ಲು ಗ್ರಾ.ಪಂ.ನಲ್ಲಿ ೫೦ ಕೋಟಿ ಕಾಮಗಾರಿ ಮಾಡಿದ್ದೇವೆ. ಇದಕ್ಕೆ ಶ್ವೇತ ಪತ್ರ ಕೊಡುತ್ತೇವೆ. ಈ ಬಾರಿ ತಡೆಗೋಡೆಗೆ ಮಾತ್ರ ೨ ಕೋಟಿ ಅನುದಾನವನ್ನು ಕಾಂಗ್ರೆಸ್ ನೀಡಿದೆ ಎಂದರು.

೨ ವರ್ಷದಿಂದ ಅತೀ ಹೆಚ್ಚು ಮಳೆಯಿಂದ ಕೃಷಿ ಹಾನಿಯಾಗಿದ್ದರೂ ಈವರೆಗೆ ರೈತರಿಗೆ ಕಾಂಗ್ರೆಸ್ ಸರ್ಕಾರ ಬಿಡಿಗಾಸೂ ಪರಿಹಾರ ನೀಡಿಲ್ಲ. ಬಿಜೆಪಿ ಸರ್ಕಾರ ಇದ್ದಾಗ ಕನಿಷ್ಟ ೫೦ ಸಾವಿರದಂತೆ ರೂ. ೬೫ ಕೋಟಿ ಪರಿಹಾರ ನೀಡಲಾಗಿತ್ತು. ಇದು ನಿಜವಾದ ರೈತಪರ ಕಾಳಜಿ. ಆದರೆ ಕಾಂಗ್ರೆಸ್‌ನಿAದ ಸಚಿವರಾಗಲಿ, ಸರ್ಕಾರದ ಭಾಗವಾಗಿರುವ ಅಧಿಕಾರಿಗಳಾಗಲೀ ಈವರೆಗೆ ಮಳೆಹಾನಿ ಸ್ಥಳಗಳ ಪರಿಶೀಲನೆ ಮಾಡಿಲ್ಲ. ಇದೇನಾ ಕಾಂಗ್ರೆಸ್‌ನ ರೈತ ಪರ ಕಾಳಜಿ ಎಂದು ಪ್ರಶ್ನಿಸಿದರು.

ಬಿಜೆಪಿ ಸರ್ಕಾರ ಇದ್ದ ಸಂದರ್ಭ ಸಿ ಮತ್ತು ಡಿ ಜಾಗದಲ್ಲಿ ಕೃಷಿ ಮಾಡಿಕೊಂಡಿರುವ, ಮನೆ ಕಟ್ಟಿಕೊಂಡಿರುವ ಮಂದಿಗೆ ನೋಟೀಸ್ ನೀಡಿಲ್ಲ. ಇಂತಹ ಜಾಗಕ್ಕೆ ಶಾಸಕರಾಗಿದ್ದ ಅಪ್ಪಚ್ಚು ರಂಜನ್ ಅವರು ಹಕ್ಕುಪತ್ರ ನೀಡಿದ್ದಾರೆ. ಬಿಜೆಪಿ ಎಂ.ಎಲ್.ಎ. ೨೫ ವರ್ಷ ಇದ್ದ ಸಂದರ್ಭ ಸಹಸ್ರಾರು ಮಂದಿಗೆ ಹಕ್ಕುಪತ್ರ ನೀಡಲಾಗಿದೆ. ಕಾಂಗ್ರೆಸ್‌ನವರೂ ಇದರ ಫಲಾನುಭವಿಯಾಗಿದ್ದಾರೆ ಎಂದು ಮಹೇಶ್ ಹೇಳಿದರು.

ಇದೀಗ ಕಾಂಗ್ರೆಸ್ ಸರ್ಕಾರ ಇಂತಹ ರೈತರಿಗೆ ನೋಟೀಸ್ ನೀಡುತ್ತಿದೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಜಾಗದ ತೆರವಿಗೆ ಆದೇಶ ನೀಡುತ್ತಿದ್ದಾರೆ. ಇದನ್ನು ವಿರೋಧಿಸಲು ಕಾಂಗ್ರೆಸ್‌ನ ಸ್ಥಳೀಯ ಶಾಸಕರಿಗೆ ಆಗುತ್ತಿಲ್ಲ. ಹೀಗಾಗಿ ‘ನೀವು ಹೋರಾಟ ಮಾಡಿ;ನಾನೇನೂ ಮಾಡಲು ಆಗಲ್ಲ’ ಎಂದು ರೈತ ಹೋರಾಟ ಸಮಿತಿಗೆ ಹೇಳಿದ್ದಾರೆ. ಇದೆಲ್ಲವೂ ಕಾಂಗ್ರೆಸ್‌ನ ರೈತವಿರೋಧಿ ನೀತಿಗೆ ಸಾಕ್ಷಿ ಎಂದು ಟೀಕಿಸಿದರು.

ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಸೋಮೇಶ್ ಮಾತನಾಡಿ, ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಕಾಡುತ್ತಿದ್ದು, ಪ್ರಸ್ತುತ ಆಸ್ಪತ್ರೆಯಲ್ಲಿ ಕೇವಲ ೨ ವೈದ್ಯರು ಮಾತ್ರ ಇದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಆಸ್ಪತ್ರೆಗೆ ತೆರಳಿ ಖುದ್ದು ಪರಿಶೀಲನೆ ನಡೆಸಲಿ. ಆಸ್ಪತ್ರೆಯನ್ನು ಉನ್ನತೀಕರಣಗೊಳಿಸಿದ್ದೇವೆ ಎಂದು ಬೀಗುವ ಕಾಂಗ್ರೆಸ್‌ನವರು ವೈದ್ಯರ ನಿಯೋಜನೆಗೆ ಮುಂದಾಗುತ್ತಿಲ್ಲ. ಎಲ್ಲವೂ ಇದ್ದು ವೈದ್ಯರೇ ಇಲ್ಲದಿದ್ದರೆ ಏನು ಪ್ರಯೋಜನ? ಎಂದು ಪ್ರಶ್ನಿಸಿದರು.

ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿಗಳದ ಮೋಕ್ಷಿಕ್ ರಾಜ್, ದರ್ಶನ್ ಜೋಯಪ್ಪ ಉಪಸ್ಥಿತರಿದ್ದರು.