ಸಿದ್ದಾಪುರ, ನ. ೧೮: ಕಾಡಾನೆಗಳ ಹಿಂಡು ಕಾಫಿ ತೋಟದೊಳಗೆ ಬೀಡು ಬಿಟ್ಟು ದಾಂಧಲೆ ನಡೆಸಿ ಕೃಷಿ ಫಸಲುಗಳನ್ನು ನಾಶಗೊಳಿಸಿದೆ.

ಕರಡಿಗೋಡು ಗ್ರಾಮದ ನಿವಾಸಿ ಕುಕ್ಕನೂರು ಮೋಹನ್ ಎಂಬವರ ಕಾಫಿ ತೋಟದ ಒಳಗೆ ಕಳೆದ ಒಂದು ವಾರಗಳಿಂದ ಕಾಡಾನೆಗಳ ಹಿಂಡು ಬೀಡು ಬಿಟ್ಟು ದಾಂದಲೆ ನಡೆಸಿ ಫಸಲಿರುವ ೮೦ ಕ್ಕೂ ಅಧಿಕ ಅಡಿಕೆ ಮರಗಳನ್ನು ಹಾಗೂ ೮೫ಕ್ಕೂ ಅಧಿಕ ಕಾಫಿ ಗಿಡಗಳನ್ನು ಧ್ವಂಸಗೊಳಿಸಿವೆ ಎಂದು ಮೋಹನ್ ವೀರಾಜಪೇಟೆ ವಲಯ ಅರಣ್ಯ ಅಧಿಕಾರಿಗೆ ದೂರು ನೀಡಿದ್ದಾರೆ. ಕಾಡಾನೆಗಳ ಉಪಟಳದಿಂದಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಕೃಷಿ ಫಸಲುಗಳು ನಷ್ಟವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾಡಾನೆಗಳ ಉಪಟಳದಿಂದಾಗಿ ನೆಮ್ಮದಿ ಇಲ್ಲದಂತಾಗಿದೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಕಾಡಾನೆಗಳ ಹಾವಳಿಯಿಂದ ನಷ್ಟಗೊಂಡಿರುವ ಕೃಷಿಕರಿಗೆ ಸೂಕ್ತ ಪರಿಹಾರವನ್ನು ಅರಣ್ಯ ಇಲಾಖೆ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.