ಸಿದ್ದಾಪುರ, ನ. ೧೭ : ಹಾಡಹಗಲೇ ಮಹಿಳೆಯ ಮೊಬೈಲ್ ಕಳ್ಳತನ ಮಾಡಿದ ಆರೋಪಿಗಳನ್ನು ಸಿದ್ದಾಪುರ ಪೊಲೀಸರು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಭಾನುವಾರದಂದು ಮಧ್ಯಾಹ್ನ ಬಾಡಗಬಾಣಂಗಾಲ ಗ್ರಾಮದ ಮಾರ್ಗೊಲ್ಲಿ ಕಾಫಿ ತೋಟದೊಳಗೆ ಕಾರುಗಳ ರ‍್ಯಾಲಿ ನೋಡಲು ತನ್ನ ಮಗುವಿನೊಂದಿಗೆ ಆಗಮಿಸಿದ್ದ ಇಂಜಿಲಗೆರೆಯ ನಿವಾಸಿ ಶೈನಿ ಎಂಬವರು ಮಾರ್ಗೊಲ್ಲಿ ಬಸ್ ತಂಗುದಾಣದಲ್ಲಿ ಮನೆಗೆ ತೆರಳಲು ಬಸ್ಸಿಗಾಗಿ ಕಾಯುತ್ತಿದ್ದರು. ಈ ಸಂದರ್ಭದಲ್ಲಿ ಏಕಾಏಕಿ ಇಬ್ಬರು ಯುವಕರು ಮಹಿಳೆ ಕೈಯಿಂದ ಮೊಬೈಲನ್ನು ಕಸಿದು ಕಾಫಿ ತೋಟದೊಳಗೆ ಓಡಿ ಹೋಗಿ ಪರಾರಿಯಾದರು. ಮಹಿಳೆಯು ಕಿರಿಚಿಕೊಂಡು ಅವರ ಹಿಂದೆಯೇ ಓಡಿದರೂ ಕೂಡ ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ. ಈ ಬಗ್ಗೆ ಗಾಬರಿಗೊಂಡ ಮಹಿಳೆ ಶೈನಿ ಸಿದ್ಧಾಪುರ ಪೊಲೀಸ್ ಠಾಣೆಗೆ ಆಗಮಿಸಿ, ದೂರು ನೀಡಿದರು. ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ತನಿಖೆ ನಡೆಸಿದ ಅಪರಾಧ ಪತ್ತೆದಳದ ಪೊಲೀಸ್ ಸಿಬ್ಬಂದಿ ಮಣಿಕಂಠ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಾದ ಘಟ್ಟದಳ್ಳದ ಖಾಸಗಿ ಕಾಫಿ ತೋಟದಲ್ಲಿ ಕಾರ್ಮಿಕರಾಗಿ ಕೆಲಸ ಮಾಡಿಕೊಂಡು ತೋಟದ ಲೈನ್ ಮನೆಯಲ್ಲಿ ವಾಸವಿದ್ದ ಪಂಜರಿಯರವರ ಸಿದ್ದಯ್ಯ.(೨೦) ಮತ್ತು ಪಂಜರಿಯರವರ ಮಾದಪ್ಪ (೨೬) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಬಂದಿತ ಆರೋಪಿಗಳಿಂದ ಮೊಬೈಲ್ ಅನ್ನು ವಶಪಡಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ೨೦೨೩ರಲ್ಲಿ ಗೋಣಿಕೊಪ್ಪಲಿನಲ್ಲಿ ಅಡಿಕೆ ಕಳ್ಳತನ ಮಾಡಿದ ಪ್ರಕರಣದಲ್ಲಿ ಇವರ ವಿರುದ್ಧ ಪ್ರಕರಣ ದಾಖಲಾಗಿತ್ತು.