ಸೋಮವಾರಪೇಟೆ, ನ. ೧೭: ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಮಡಿಕೇರಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ರಾಜ್ಯ ಒಕ್ಕಲಿಗರ ಸಂಘದ ಕೊಡಗು ಜಿಲ್ಲಾ ನಿರ್ದೇಶಕ, ದಾನಿ ಹರಪಳ್ಳಿ ರವೀಂದ್ರ ಅವರು ರಾಜ್ಯದ ಮಾಜಿ ಉಪ ಮುಖ್ಯಮಂತ್ರಿ ಡಾ. ಅಶ್ವಥ್‌ನಾರಾಯಣ್ ಅವರ ಸಮಕ್ಷಮ, ಜಿಲ್ಲಾ ಮಟ್ಟದ ಬಿಜೆಪಿ ನಾಯಕರೊಂದಿಗೆ ಅಧಿಕೃತವಾಗಿ ಭಾರತೀಯ ಜನತಾ ಪಾರ್ಟಿ ಸೇರ್ಪಡೆಗೊಂಡರು.
ಜೇಸೀ ವೇದಿಕೆಯಲ್ಲಿ ಆಯೋಜನೆಗೊಂಡಿದ್ದ ರಾಜ್ಯ ಸರ್ಕಾರದ ವಿರುದ್ಧದ ಪ್ರತಿಭಟನಾ ಸಭೆಯ ವೇದಿಕೆಯಲ್ಲಿ ಹರಪಳ್ಳಿ ರವೀಂದ್ರ ಸೇರಿದಂತೆ ಅವರ ಬೆಂಬಲಿಗರನ್ನು ಬಿಜೆಪಿ ಮುಖಂಡರಾದ ಅಶ್ವಥ್ ನಾರಾಯಣ್, ಮಾಜೀ ಶಾಸಕರುಗಳಾದ ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ, ಪಕ್ಷದ ಜಿಲ್ಲಾಧ್ಯಕ್ಷ ರವಿ ಕಾಳಪ್ಪ, ಮಾಜೀ ಅಧ್ಯಕ್ಷ ಬಿ.ಬಿ. ಭಾರತೀಶ್, ಮಂಡಲ ಅಧ್ಯಕ್ಷ ಗೌತಮ್ ಗೌಡ ಸೇರಿದಂತೆ ಇತರರು ಪಕ್ಷದ ಬಾವುಟ ನೀಡಿ ಬರಮಾಡಿಕೊಂಡರು.
ಈ ಸಂದರ್ಭ ಮಾತನಾಡಿದ ಬಿಜೆಪಿ ಮುಖಂಡರು, ದಾನಿಗಳಾಗಿ, ಸಮಾಜ ಸೇವಕರಾಗಿ, ಒಕ್ಕಲಿಗರ ಸಂಘದ ನಿರ್ದೇಶಕರಾಗಿ ಸಮಾಜ ಸೇವೆ ಮಾಡುತ್ತಿರುವ ರವೀಂದ್ರ ಅವರ ಸೇರ್ಪಡೆಯಿಂದ ಬಿಜೆಪಿಗೆ ಇನ್ನಷ್ಟು ಶಕ್ತಿ ಬಂದAತಾಗಿದೆ ಎಂದು ಅಭಿಪ್ರಾಯಿಸಿದರು.
ಪಕ್ಷ ಸೇರ್ಪಡೆ ನಂತರ ಮಾತನಾಡಿದ ಹರಪಳ್ಳಿ ರವೀಂದ್ರ, ಅಟಲ್ ಬಿಹಾರಿ ವಾಜಪೇಯಿ ಅವರ ತತ್ವ ಆದರ್ಶ ಹಾಗೂ ಮೋದಿ ಅವರ ರಾಷ್ಟçಪ್ರೇಮ, ಅಭಿವೃದ್ಧಿ ಕಾರ್ಯಗಳಿಂದ ಪ್ರೇರಣೆಗೊಂಡು ಯಾವುದೇ ಬೇಡಿಕೆಗಳನ್ನು ಮುಂದಿಡದೆ ಬಿಜೆಪಿ ಸೇರ್ಪಡೆಯಾಗಿರುವುದಾಗಿ ತಿಳಿಸಿದರು.
ಸಮಾಜ ಸೇವೆ ಮಾಡುವವರಿಗೆ ಕಾಂಗ್ರೆಸ್‌ನಲ್ಲಿ ಗೌರವ ಇಲ್ಲ ಎಂಬುದು ಮನವರಿಕೆಯಾಗಿದೆ. ಜಿಲ್ಲೆಯಲ್ಲಿ ಬಿಜೆಪಿ ಸಂಘಟಿಸಲು, ಪ್ರಧಾನಿ ನರೇಂದ್ರ ಮೋದಿ ಕೈ ಬಲಪಡಿಸಲು, ನಾಯಕರುಗಳಿಗೆ ಬೆಂಬಲವಾಗಿ ಶ್ರಮಿಸಲಾಗುವುದು. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
೩೦ ಸಾವಿರಕ್ಕೂ ಅಧಿಕ ಏಕರೆ ಸಿ ಮತ್ತು ಡಿ ಜಾಗದಲ್ಲಿ ರೈತರು ಬದುಕು ಕಟ್ಟಿಕೊಂಡಿದ್ದಾರೆ. ಇವರನ್ನು ಒಕ್ಕಲೆಬ್ಬಿಸುವ ಹುನ್ನಾರದ ವಿರುದ್ಧ ಹೋರಾಟಗಳನ್ನು ಸಂಘಟಿಸಲಾಗುವುದು. ಸಚಿವರು ಬೆಂಗಳೂರಿನಲ್ಲಿ ಕುಳಿತು ಆದೇಶ ಹೊರಡಿಸುವ ಮುಂಚೆ ಕೊಡಗಿನ ಶಾಂತಳ್ಳಿ, ಬೆಟ್ಟದಳ್ಳಿ, ತಡ್ಡಿಕೊಪ್ಪ, ಹರಗ, ಕೊತ್ನಳ್ಳಿ ಭಾಗಕ್ಕೆ ಬಂದು ವಾಸ್ತವತೆಯನ್ನು ಅರಿಯಬೇಕು. ಈ ಬಗ್ಗೆ ವಸ್ತುನಿಷ್ಠ ವರದಿ ತಯಾರಿಸಿ ದಾಖಲೆ ಸಹಿತ ನ್ಯಾಯಾಲಯಕ್ಕೆ ರಿವ್ಯೂ ಪಿಟಿಷನ್ ಹಾಕಬೇಕು. ಆದರೆ ಈ ಕೆಲಸವನ್ನು ಆಡಳಿತ ಪಕ್ಷದ ಜನಪ್ರತಿನಿಧಿಗಳು ಮಾಡುತ್ತಿಲ್ಲ ಎಂದು ಆರೋಪಿಸಿದರು.
ಕಾರ್ಯಕ್ರಮದಲ್ಲಿ ಯೂತ್ ಕಾಂಗ್ರೆಸ್ ಉಪಾಧ್ಯಕ್ಷ ಯೋಗೇಶ್, ಪ.ಪಂ.ನಾಮನಿರ್ದೇಶಿತ ಮಾಜೀ ಸದಸ್ಯ ಹೆಚ್.ಎ. ನಾಗರಾಜು, ಕಾಟ್ನಮನೆ ಗಿರೀಶ್, ನಗರಳ್ಳಿ ಬಸಪ್ಪ, ಜಿ.ಪಂ. ಮಾಜೀ ಸದಸ್ಯೆ ಜಲಾ ಹೂವಯ್ಯ, ಅಚಲ್ ರವೀಂದ್ರ, ಕೂತಿ ಗ್ರಾಮದ ಕೆ.ಎ. ಅಶೋಕ್, ವಿರೂಪಾಕ್ಷ, ವೆಂಕಟೇಶ್, ಅಜಯ್, ಕೆಂಚೇಶ್ವರ್ ಸೇರಿದಂತೆ ಇತರರು ಬಿಜೆಪಿ ಸೇರ್ಪಡೆಗೊಂಡರು.