ಪೊನ್ನಂಪೇಟೆ, ನ. ೧೬: ಗೋಣಿಕೊಪ್ಪಲು ಕಾವೇರಿ ಪದವಿಪೂರ್ವ ಕಾಲೇಜಿನ ಪೋಷಕರು ಮತ್ತು ಅಧ್ಯಾಪಕರ ಸಭೆ ಕಾಲೇಜಿನ ಚೆಕ್ಕೇರ ಮುತ್ತಣ್ಣ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿಕೊಂಡಿದ್ದ ಕಾವೇರಿ ಎಜುಕೇಷನ್ ಸೊಸೈಟಿ ನಿರ್ದೇಶಕಿ ಪಳಂಗAಡ ವಾಣಿ ಚಂಗಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ಶಿಕ್ಷಣ ಸಂಸ್ಥೆಯ ವತಿಯಿಂದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಲಾಗುತ್ತಿದೆ. ಪೋಷಕರೂ ಕೂಡ ಮಕ್ಕಳ ಶಿಕ್ಷಣದ ಕಡೆಗೆ ಹೆಚ್ಚಿನ ಮುತುವರ್ಜಿ ವಹಿಸುವ ಮೂಲಕ ಅವರು ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳುವಂತೆ ಮಾಡಬೇಕು ಎಂದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಗೋಣಿಕೊಪ್ಪಲು ಪ್ರೌಢಶಾಲೆಯ ಮುಖ್ಯ ಶಿಕ್ಷಕ ಹಾಗೂ ಕಾವೇರಿ ಕಾಲೇಜು ಹಳೆಯ ವಿದ್ಯಾರ್ಥಿ ಬಿ.ಟಿ. ರತೀಶ್ ರೈ ಮಾತನಾಡಿ, ಮಕ್ಕಳು ಪೋಷಕರನ್ನು ಅನುಸರಿಸುತ್ತಾರೆ. ಆದ್ದರಿಂದ ಪೋಷಕರು ಮಕ್ಕಳೆದುರು ಯಾವುದೇ ರೀತಿಯ ಕೆಟ್ಟನಡವಳಿಕೆಯನ್ನು ತೋರ್ಪಡಿಸಿಕೊಳ್ಳಬಾರದು ಎಂದರು.

ಕೆಲವು ಮಕ್ಕಳು ಇತ್ತೀಚಿನ ದಿನಗಳಲ್ಲಿ ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳ ದಿನಚರಿಯ ಬಗ್ಗೆ ಗಮನವಿಡಬೇಕು ಹಾಗೂ ಅತಿಯಾದ ಮೊಬೈಲ್ ಬಳಕೆಗೆ ಕಡಿವಾಣ ಹಾಕಬೇಕು ಎಂದರು.

ಮತ್ತೊಬ್ಬರು ಅತಿಥಿ ವೀರಾಜಪೇಟೆ ಕೂರ್ಗ್ ವ್ಯಾಲಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಸುಮ ಚಿತ್ರಬಾನು ಮಾತನಾಡಿ, ವಿದ್ಯಾರ್ಥಿಯ ಸಾಮಾಜಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಪೋಷಕರು ಹಾಗೂ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ. ಪೋಷಕರು ಆಗಿಂದಾಗೆ ಕಾಲೇಜಿಗೆ ಬಂದು ತಮ್ಮ ಮಕ್ಕಳ ಕಲಿಕಾ ಪ್ರಗತಿಯ ಬಗ್ಗೆ ತಿಳಿದುಕೊಳ್ಳಬೇಕು. ಮಕ್ಕಳು ಮೊಬೈಲ್ ಬದಿಗಿಟ್ಟು ಪುಸ್ತಕ ಹಾಗೂ ದಿನಪತ್ರಿಕೆ ಓದುವಂತೆ ಮಕ್ಕಳನ್ನು ಪ್ರೇರೇಪಿಸಬೇಕು ಎಂದರು.

ಪ್ರಾAಶುಪಾಲ ಎಸ್.ಎಸ್. ಮಾದಯ್ಯ ಮಾತನಾಡಿ, ಕಾಲೇಜಿನಲ್ಲಿ ಶಿಕ್ಷಣದ ಜೊತೆಗೆ ಕ್ರೀಡೆ, ಎನ್‌ಸಿಸಿ, ಎನ್‌ಎಸ್‌ಎಸ್‌ನಲ್ಲಿಯೂ ವಿದ್ಯಾರ್ಥಿಗಳ ಬೆಳವಣಿಗೆಗೆ ಅವಕಾಶ ಮಾಡಿಕೊಟ್ಟಿದ್ದು, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಾಲೇಜು ಬಸ್ ವ್ಯವಸ್ಥೆಯನ್ನು ಮಾಡಲಾಗಿದೆ. ಹಿರಿಯರು ಕಟ್ಟಿ ಬೆಳೆಸಿದ ಶಿಕ್ಷಣ ಸಂಸ್ಥೆ ಇಂದು ಎಲ್ಲಾ ಪೋಷಕರ ಸಹಕಾರದಿಂದ ಯಶಸ್ವಿಯಾಗಿ ಮುನ್ನಡೆಯಲು ಸಾಧ್ಯವಾಗಿದೆ ಎಂದರು.

ಪೋಷಕರು, ಕಾಲೇಜಿನ ಶಿಸ್ತು ಹಾಗೂ ಶಿಕ್ಷಣ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಕೆಲವು ಸಲಹೆಗಳನ್ನು ನೀಡಿ, ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿ ಬಗ್ಗೆ ಮಾಹಿತಿ ಪಡೆದರು. ಈ ಸಂದರ್ಭ ಪೋಷಕ ಮತ್ತು ಅಧ್ಯಾಪಕರ ಸಂಘದ ಕಾರ್ಯದರ್ಶಿ ರೇಷ್ಮಾ ಬಿ.ಎ., ಪೋಷಕರ ಮತ್ತು ಅಧ್ಯಾಪಕರ ಸಂಘದ ಸಂಚಾಲಕಿ ಎಂ.ಬಿ. ಪೂವಮ್ಮ ಇದ್ದರು. ವಿದ್ಯಾರ್ಥಿಗಳು ನೃತ್ಯದ ಮೂಲಕ ರಂಜಿಸಿದರು. ತನ್ಮಯಿ ತಂಡ ಪ್ರಾರ್ಥಿಸಿ, ಹಿರಿಯ ಉಪನ್ಯಾಸಕಿ ಎಂ.ಕೆ. ಪದ್ಮ ಸ್ವಾಗತಿಸಿ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕ ಡಾ. ಲೆಫ್ಟಿನೆಂಟ್ ಎಂ.ಆರ್. ಆಕ್ರಂ ವಂದಿಸಿ, ಸರಸ್ವತಿ ಹಾಗೂ ಕುಸುಮ್ ಕಾರ್ಯಕ್ರಮ ನಿರೂಪಿಸಿದರು.