ಸೋಮವಾರಪೇಟೆ, ನ. ೧೬: ಕೊಡಗು ಪತ್ರಕರ್ತರ ಸಂಘದ ಸೋಮವಾರಪೇಟೆ ತಾಲೂಕು ಘಟಕದಿಂದ ನೀಡಲಾಗುವ ವಾರ್ಷಿಕ ಪ್ರಶಸ್ತಿಗೆ ಭಾಜನರಾದ ನಾಲ್ವರು ಪತ್ರಕರ್ತರಿಗೆ ಇಲ್ಲಿನ ಪತ್ರಿಕಾಭವನದಲ್ಲಿ ಆಯೋಜನೆಗೊಂಡಿದ್ದ ಸಂಘದ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕೊಡಗು ಪತ್ರಕರ್ತರ ಸಂಘದ ತಾಲೂಕು ಘಟಕದ ಅಧ್ಯಕ್ಷ ಹೆಚ್.ಆರ್. ಹರೀಶ್‌ಕುಮಾರ್ ತಮ್ಮ ತಂದೆ ದಿ. ರಾಮೇಗೌಡ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಗ್ರಾಮೀಣ ವರದಿ ಪ್ರಶಸ್ತಿಯನ್ನು, ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ ಐಗೂರಿನಲ್ಲಿ ಇನ್ನೂ ಪ್ರಾರಂಭವಾಗದ ಸೇತುವೆ ಕಾಮಗಾರಿ ವರದಿಗೆ ಎಂ.ಎ. ಸುಕುಮಾರ್ ಪಡೆದರು.

ಕೊಡಗು ಪತ್ರಕರ್ತರ ಸಂಘದ ಸ್ಥಾಪಕ ಅಧ್ಯಕ್ಷ ಎಸ್.ಎ. ಮುರಳೀಧರ್ ಅವರು ತಮ್ಮ ತಂದೆ ದಿ. ಅಪ್ಪಸ್ವಾಮಿ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಕ್ರೀಡಾ ವರದಿ ಪ್ರಶಸ್ತಿಯನ್ನು ವಿಜಯಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ಅಂತರರಾಷ್ಟೀಯ ಕ್ರೀಡೆಗೆ ತಾಯಿ-ಮಗ ಆಯ್ಕೆ ವಿಶೇಷ ವರದಿಗಾಗಿ ತೇಲಪಂಡ ಕವನ್ ಕಾರ್ಯಪ್ಪ ಅವರಿಗೆ ನೀಡಲಾಯಿತು.

ಕೊಡಗು ಪತ್ರಕರ್ತರ ಸಂಘದ ಉಪಾಧ್ಯಕ್ಷ ತೇಲಪಂಡ ಕವನ್ ಕಾರ್ಯಪ್ಪ ತಮ್ಮ ತಾಯಿ ದಿ. ತೇಲಪಂಡ ಶಾರದ ಮತ್ತು ಸೋಮಣ್ಣ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಮಾನವೀಯ ವರದಿ ಪ್ರಶಸ್ತಿಯನ್ನು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಪೌರ ಕಾರ್ಮಿಕರಿಗೆ ತಪ್ಪದ ಸಂಕಷ್ಟ ವಿಶೇಷ ವರದಿಗೆ ಡಿ.ಪಿ. ಲೋಕೇಶ್ ಪಡೆದರು.

ಕಾನ್ವೆಂಟ್ ಬಾಣೆ ನಿವಾಸಿ ಯಶಸ್ವಿನಿ ಚಂದ್ರಕಾAತ್ ತಮ್ಮ ತಂದೆ ದಿ. ಕೂಗೂರು ತಿಮ್ಮಪ್ಪ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಕೃಷಿ ವರದಿ ಪ್ರಶಸ್ತಿಯನ್ನು ಕನ್ನಡ ಪ್ರಭದಲ್ಲಿ ಪ್ರಕಟವಾದ ಕೈಕೊಟ್ಟ ಮಳೆ ಬೆಳೆಗಾರ ಕಂಗಾಲು ವಿಶೇಷ ವರದಿಗೆ ಎಸ್.ಎ. ಮುರಳೀಧರ ಭಾಜನರಾದರು.

ತಾಲೂಕು ಸಂಘದ ಅಧ್ಯಕ್ಷ ಹೆಚ್.ಆರ್. ಹರೀಶ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಗಿರೀಶ್ ಮಲ್ಲಪ್ಪ, ಹನೀಫ್, ಸಂಘದ ಜಿಲ್ಲಾಧ್ಯಕ್ಷ ಹೆಚ್.ಟಿ. ಅನಿಲ್ ಅವರುಗಳು ಉಪಸ್ಥಿತರಿದ್ದು, ಪ್ರಶಸ್ತಿ ಪ್ರದಾನ ಮಾಡಿದರು.

ಸಂಘದ ಉಪಾಧ್ಯಕ್ಷ ಕವನ್ ಕಾರ್ಯಪ್ಪ, ಪ್ರಧಾನ ಕಾರ್ಯದರ್ಶಿ ಡಿ.ಪಿ. ಲೋಕೇಶ್ ಅವರುಗಳು ಕಾರ್ಯಕ್ರಮ ನಿರ್ವಹಿಸಿದರು.