ಸಿದ್ದಾಪುರ, ನ. ೧೫ : ಆತ್ಮಹತ್ಯೆ ಮಾಡಿಕೊಂಡಿದ್ದಳು ಎನ್ನಲಾದ ಮಹಿಳೆಯ ಮೃತದೇಹವನ್ನು ಹೊರ ಜಿಲ್ಲೆಯಿಂದ ಕೊಡಗು ಜಿಲ್ಲೆಗೆ ತರುತ್ತಿದ್ದ ಸಂದರ್ಭ ಮಾಲ್ದಾರೆ ಗ್ರಾಮದ ಲಿಂಗಪುರ ಅರಣ್ಯ ಚೆಕ್ ಪೋಸ್ಟ್ ಬಳಿ ಅರಣ್ಯ ಸಿಬ್ಬಂದಿಗಳು ಪತ್ತೆಹಚ್ಚಿ ಮೂವರನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ಶುಕ್ರವಾರ ತಡ ರಾತ್ರಿ ನಡೆದಿದೆ.

ಮೂಲತಃ ಹರಿಯಾಣ ರಾಜ್ಯದ ನಿವಾಸಿಗಳಾದ ರಾಕೇಶ್ ಕುಮಾರ್ (೪೩) ಮತ್ತು ಆತನ ಪತ್ನಿ ನಾನಕಿ ದೇವಿ (೪೫) ಹಾಗೂ ಇವರೊಂದಿಗೆ ಸತ್ವೀರ್ (೩೩೨) ಮತ್ತು ವಿಕಾಸ್ (೩೨) ಎಂಬ ನಾಲ್ವರು ಮೈಸೂರಿನ ಮೇಟಗಳ್ಳಿ ಠಾಣಾ ವ್ಯಾಪ್ತಿಯ ಬಾಡಿಗೆ ಮನೆಯೊಂದರಲ್ಲಿ ವಾಸ ಮಾಡಿಕೊಂಡಿದ್ದರು. ಈ ಮೂವರು ಪುರುಷರು ಕಾರ್ಪೆಂಟರ್ ಕೆಲಸ ಮಾಡಿಕೊಂಡಿದ್ದರು. ಶುಕ್ರವಾರದಂದು ಈ ಮೂವರು ಕೆಲಸಕ್ಕೆ ತೆರಳಿದ್ದ ಸಂದರ್ಭ ಮನೆಯಲ್ಲಿ ಯಾರು ಇಲ್ಲದ ವೇಳೆ ನಾನಕಿ ದೇವಿ ರಾತ್ರಿ ೮ ಗಂಟೆ ಸುಮಾರಿಗೆ ಮನೆಯ ಕೋಣೆಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು ಎನ್ನಲಾಗಿದೆ. ಕೆಲಸಕ್ಕೆ ತೆರಳಿದ್ದ ರಾಕೇಶ್ ಕುಮಾರ್ ರಾತ್ರಿ ಮನೆಗೆ ಬಂದಾಗ ಮನೆಯ ಬಾಗಿಲು ಮುಚ್ಚಿರುವುದನ್ನು ಕಂಡು ಸಾಕಷ್ಟು ಬಾರಿ ನಾನಕಿ ದೇವಿಯನ್ನು ಕರೆದಿದ್ದಾನೆ. ಆದರೆ ಆಕೆ ಬಾಗಿಲು ತೆರೆಯಲಿಲ್ಲ ಎನ್ನಲಾಗಿದ್ದು, ಬಾಗಿಲು ಮುರಿದು ಒಳನುಗ್ಗಿ ನೋಡಿದಾಗ ಆಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂತು ಎಂದು ನಾನಕಿ ದೇವಿಯ ಗಂಡ ರಾಕೇಶ್ ಕುಮಾರ್ ಪೊಲೀಸರಿಗೆ ತಿಳಿಸಿದ್ದಾನೆ. ಕೂಡಲೇ ಆಕೆಯನ್ನು ತನ್ನ ಸಹಪಾಠಿಗಳೊಂದಿಗೆ ಸೇರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಮಾರ್ಗ ಮಧ್ಯದಲ್ಲಿ ಆಕೆ ಸಾವನ್ನಪ್ಪಿರುವುದು ತಿಳಿದು ಬಂತು. ಇದರಿಂದಾಗಿ ಗಾಬರಿಗೊಂಡ ನಾವುಗಳು ಏನು ಮಾಡಬೇಕೆಂದು ತಿಳಿಯದೆ ಆಕೆಯ ಮೃತ ದೇಹದೊಂದಿಗೆ ತಮ್ಮ ಕಾರಿನಲ್ಲಿ (ಮಾರುತಿ ಸಜುಕಿ ಅಲ್ಟೋ ೮೦೦-ಹೆಚ್‌ಆರ್-೨೬-ಸಿಇ ೯೨೭೩) ಕೊಡಗು ಜಿಲ್ಲೆಯತ್ತ ಬಂದಿರುವುದಾಗಿ ಮೂವರೂ ಪೊಲೀಸರ ತನಿಖೆ ಸಂದರ್ಭದಲ್ಲಿ ತಿಳಿಸಿದ್ದಾರೆ. ಮೃತ ನಾನಕಿ ದೇವಿ ಮೊದಲನೇ ಗಂಡನನ್ನು ತೊರೆದಿದ್ದು ರಾಕೇಶ್ ಕುಮಾರ್‌ನೊಂದಿಗೆ ಆಕೆ ಮೈಸೂರಿನಲ್ಲಿ ವಾಸವಾಗಿದ್ದಳು ಎನ್ನಲಾಗಿದೆ.

ಮೃತದೇಹವನ್ನು ಕಾರಿನಲ್ಲಿ ಮೈಸೂರಿನಿಂದ ಮಾಲ್ದಾರೆ ಭಾಗಕ್ಕೆ ತರುತ್ತಿದ್ದ ಸಂದರ್ಭ ಲಿಂಗಪುರದ ಅರಣ್ಯ ತನಿಖಾ ಠಾಣೆಯಲ್ಲಿ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ಕಂಡ ಮೂವರು ಕಾರನ್ನು ಮೈಸೂರಿನತ್ತ ತಿರುಗಿಸಿ ತೆರಳಲು ಮುಂದಾದರು. ಇದರಿಂದ ಅನುಮಾನಗೊಂಡ ಅರಣ್ಯ ಇಲಾಖೆಯ ಅರಣ್ಯ ವೀಕ್ಷಕರಾದ ದೀಪಿಕ, ರಘು, ಹಂಗಾಮಿ ಅರಣ್ಯ ವೀಕ್ಷರಾದ ಲಿಂಗಪ್ಪ, ಅರಣ್ಯ ರಕ್ಷಕ ಹನುಮಂತಪ್ಪ, ಹಂಗಾಮಿ ಚಾಲಕ ಕಾರ್ತಿಕ್ ಇವರುಗಳು ಕಾರನ್ನು ತಡೆದು ಪರಿಶೀಲನೆ ನಡೆಸಿದಾಗ ಮೃತದೇಹ ಪತ್ತೆಯಾಗಿ ವಿಚಾರ ಬೆಳಕಿಗೆ ಬಂತು. ಕೂಡಲೆ ಅರಣ್ಯ ಇಲಾಖೆಯವರು ಸಿದ್ದಾಪುರ ಪೊಲೀಸರಿಗೆ ದೂರು ನೀಡಿದ ಮೇರೆಗೆ ಕಾರು ಸೇರಿ ಮೂವರನ್ನು ಪೊಲೀಸರು ವಶಕ್ಕೆ ಪಡೆದರು. ಸ್ಥಳಕ್ಕೆ ಎಸ್ಪಿ ಕೆ. ರಾಮರಾಜನ್, ಡಿವೈಎಸ್ಪಿ ಸೂರಜ್ ಮಾರ್ಗದರ್ಶನದಲ್ಲಿ ಮಡಿಕೇರಿ ಸಿಐ ರಾಜು, ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ಮಂಜುನಾಥ್ ಹಾಗೂ ಸಹಾಯಕ ಠಾಣಾಧಿಕಾರಿ ಶ್ರೀನಿವಾಸ್ ಮತ್ತು ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಮಹಜರು ನಡೆಸಿ ಘಟನೆ ಸಂಬAಧ ಸಂಶಯಾಸ್ಪದ ಸಾವು ಪ್ರಕರಣವನ್ನು ದಾಖಲಿಸಿದ್ದಾರೆ. ಮಹಿಳೆಯ ಮೃತದೇಹವನ್ನು ಇಲ್ಲೇ ಇರಿಸಿಕೊಳ್ಳಲಾಗಿದ್ದು, ಮರಣೋತ್ತರ ಪರೀಕ್ಷೆ ವರದಿ ಹಾಗೂ ಪ್ರತ್ಯಕ್ಷ ಸಾಕ್ಷಿಗಳ ವಿಚಾರಣೆ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಕೆ. ರಾಮರಾಜನ್ ತಿಳಿಸಿದ್ದಾರೆ.