ವೀರಾಜಪೇಟೆ, ನ. ೧೩: ಕೊಡಗು ರಮಣೀಯ ಪರಿಸರದ, ಪ್ರಕೃತಿ ಸೊಬಗಿನ ನಾಡು. ಇದು ಕಲಾವಿದರಿಗೆ ಸ್ಫೂರ್ತಿ ನೀಡುತ್ತದೆ. ಇದನ್ನೆ ಕುಂಚದಲ್ಲಿ ಅರಳಿಸಿದರೆ ಉತ್ತಮ ಕಲಾಕೃತಿ ಮೂಡಿ ಬರುತ್ತದೆ. ಆದರಿಂದ ಕಲಾವಿದರಿಗೆ ಒತ್ತಾಸೆ ನೀಡುವಂತಹ ತಾಣಗಳನ್ನು ಆರಿಸಿ ಚಿತ್ರಕಲಾ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದು ಹವ್ಯಾಸಿ ಛಾಯಾಗ್ರಹಕ ಮತ್ತು ಕಲಾವಿದ ಜುನೈಶ್ ಕಣ್ಣೂರು ಹೇಳಿದರು.
ವೀರಾಜಪೇಟೆಯ ಮೊಗರಗಲ್ಲಿಯಲ್ಲಿ ಸಾದಿಕ್ ಅರ್ಟ್ ಗ್ಯಾಲರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಕಲಾ ಉತ್ಸವ ೨೦೨೫ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ ಜುನೈಶ್ ಕಣ್ಣೂರು, ಕಲೆಯು ನಿಂತ ನೀರಲ್ಲ. ಎಲ್ಲಾ ಮನಸ್ಸುಗಳಲ್ಲಿ ಕಲೆ ಎಂಬುದು ಸುಪ್ತವಾಗಿ ಉಳಿದಿದೆ. ಅದನ್ನು ಪ್ರದರ್ಶನ ಮಾಡಿದಲ್ಲಿ ಕಲಾವಿದ ಪ್ರಚಾರ ಪಡೆದುಕೊಳ್ಳುತ್ತಾನೆ.
ಕಲೆ, ಸಾಹಿತ್ಯಕ್ಕೆ ಕೊಡಗು ಮರುಭೂಮಿಯಂತೆ ಎನ್ನುತ್ತಾರೆ. ವಿದ್ಯಾವಂತರಿದ್ದರು ಕಲೆ, ಸಾಹಿತ್ಯ ಕಾರ್ಯಕ್ರಮಗಳಿಗೆ ಬರುವುದಿಲ್ಲ ಹಾಗೂ ಪ್ರೋತ್ಸಾಹ ನೀಡುವುದಿಲ್ಲ. ಆದರಿಂದ ಆರ್ಥಿಕ ಮತ್ತು ಪ್ರೋತ್ಸಾಹ ನೀಡಿ ಕಲಾವಿದರಿಗೆ ವೇದಿಕೆ ಒದಗಿಸಬೇಕು. ಕಲಾವಿದರಿಗೆ ಜೊತೆಯಾಗಿ ನಿಂತು ಸಹಕಾರ ನೀಡಬೇಕು. ನಾವು ಮಾಡುವ ಕೆಲಸದಲ್ಲಿ ಶ್ರದ್ದೆ ಇರಬೇಕು. ಜೊತೆಗೆ ಪ್ರತಿಯೊಂದು ಕೆಲಸವನ್ನು ಮಾಡಲು ಸಿದ್ಧರಿರಬೇಕು. ಚಿತ್ರಕಲೆಯ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ವಿಫುಲ ಅವಕಾಶಗಳಿವೆ. ವಿದ್ಯಾರ್ಥಿಗಳು ಚಿತ್ರಕಲೆಯನ್ನು ಆಯ್ಕೆ ಮಾಡಿಕೊಂಡಲ್ಲಿ ಕಲೆಗೆ ಹೊಸ ಅಧ್ಯಾಯ ತೋರಿಸಿಕೊಟ್ಟಂತಾಗುತ್ತದೆ ಎಂದು ಹೇಳಿದರು.
ಚಿತ್ರಕಲಾವಿದ ಬಾವ ಮಾಲ್ದಾರೆ ಮಾತನಾಡಿ, ಕಲೆಯನ್ನು ಗೌರವಿಸಬೇಕು. ಎಲೆಮರೆಯ ಕಾಯಿಯಂತೆ ಚಿತ್ರಕಲೆಯು ಒಂದು ಭಾಗವಾಗಿ ಇಂದು ಅನೇಕ ಹೆಸರುವಾಸಿ ಚಿತ್ರಕಲಾವಿದರನ್ನು ಪುಟ್ಟ ಜಿಲ್ಲೆಯು ಹುಟ್ಟುಹಾಕುತ್ತಿದೆ ಎಂದರು.
ಚಲನಚಿತ್ರ ನಟ ವಾಂಚಿರ ಟಿ. ನಾಣಯ್ಯ ಮಾತನಾಡಿ, ಕಲಾವಿದರಿಗೆ ಮುಖ್ಯವಾಗಿ ಏಕಾಗ್ರತೆ ಬೇಕು. ಜೊತೆಗೆ ಪ್ರೋತ್ಸಾಹ ಹಾಗೂ ಅವಕಾಶಗಳು ದೊರೆಯುವಂತಾಗಬೇಕು. ಕಲೆಯನ್ನು ಉಳಿಸಿ ಬೆಳೆಸಲು ಎಲ್ಲರೂ ಕೈಜೋಡಿಸಿಬೇಕು ಎಂದರು.
ಕೊಡಗಿನ ಚಿತ್ರಕಲಾ ಶಿಕ್ಷಕ ಬಿ.ಆರ್ ಸತೀಶ್ ಮಾತನಾಡಿ, ನಮ್ಮ ಕಾವೇರಿ ತಪೋ ಭೂಮಿಯಲ್ಲಿ ಅನೇಕ ಮಹಾನ್ ಕಲಾವಿದರಿದ್ದಾರೆ. ಕಲಾವಿದನಿಗೆ ಪ್ರತಿಯೊಂದು ವಸ್ತು ಕೂಡ ವಿಭಿನ್ನವಾಗಿ ಕಾಣಿಸುತ್ತದೆ. ಆದರೆ ಕಲಾವಿದರಿಗೆ ವೇದಿಕೆಯ ಅಗತ್ಯವಿದೆ, ಆ ಮೂಲಕ ಅವರನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕಿದೆ ಎಂದರು.
ಪರಸಭೆ ಮಾಜಿ ಸದಸ್ಯ ಮಹಮ್ಮದ್ ರಾಫಿ, ವಾಸವನ್ ಪಯ್ಯಟಂ, ಕಾಸರಗೋಡು ನಿವೃತ್ತ ಚಿತ್ರಕಲಾ ಶಿಕ್ಷಕರಾದ ಎಂ. ದಾಮೋಧರನ್ ಕಣ್ಣೂರು, ಸಾಹಿತಿ ವೈಲೇಶ್ ಇತರರು ಮಾತನಾಡಿದರು.
ಶಿಬಿರ ಆಯೋಜಕ ಚಿತ್ರ ಕಲಾವಿದ ಸಾದಿಕ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ಸಂದರ್ಭ ಚಿತ್ರಕಲಾವಿದರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ನಾಸಿರ್ ಕೊಂಡAಗೇರಿ, ಶಿಕ್ಷಕಿ ವಿಶಾಲಾಕ್ಷಿ ಸೇರಿದಂತೆ ಕೊಡಗು ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಹಿರಿಯ, ಕಿರಿಯ ಕಲಾವಿದರು, ಕೇರಳ ಚಿತ್ರಕಲಾ ಪರಿಷತ್‌ನ ಸದಸ್ಯರು, ವಿವಿಧ ರಂಗದ ಕಲಾವಿದರು ಹಾಗೂ ಸಾರ್ವಜನಿಕರು ಚಿತ್ರಕಲಾ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.
ಕಲಾವಿದರುಗಳ ಕಲಾ ಚಿತ್ರಗಳನ್ನು ಇದೇ ಸಂದರ್ಭ ಪ್ರದರ್ಶಿಸಲಾಯಿತು.