ಮಡಿಕೇರಿ, ನ. ೧೧: ಮಡಿಕೇರಿ ನಗರದ ಮಹದೇವಪೇಟೆಯ ಎಸ್‌ಎಸ್ ಆಸ್ಪತ್ರೆ ಮತ್ತು ಆರ್‌ಕೆ ಲ್ಯಾಬ್ ವತಿಯಿಂದ ವಿದ್ಯಾರ್ಥಿಗಳಿಗಾಗಿ ೩ನೇ ವರ್ಷದ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆ ತಾ. ೧೬ ರಂದು ನಡೆಯಲಿದೆ.

ಮಹದೇವಪೇಟೆಯ ಎಎಲ್‌ಜಿ ಕ್ರೆಸೆಂಟ್ ಶಾಲೆಯಲ್ಲಿ ಭಾನುವಾರ ಬೆಳಿಗ್ಗೆ ೯.೩೦ ರಿಂದ ೧೧.೩೦ ರವರೆಗೆ ಸ್ಪರ್ಧೆಗಳು ಮೂರು ವಿಭಾಗಗಳಲ್ಲಿ ನಡೆಯಲಿವೆ. ಅಂದು ಬೆಳಿಗ್ಗೆ ೮.೩೦ರಿಂದ ಸ್ಪರ್ಧಿಗಳು ಉಚಿತವಾಗಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಎಸ್‌ಎಸ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಶಿಲ್ಪಾ ಸತೀಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರತಿ ವಿಭಾಗಕ್ಕೆ ಮೂರು ಆಕರ್ಷಕ ಟ್ರೋಫಿ ಮತ್ತು ನಗದು ಬಹುಮಾನವನ್ನು ನೀಡಲಾಗುತ್ತದೆ.

ಮೊದಲನೇ ವಿಭಾಗ: ಎಲ್‌ಕೆಜಿಯಿಂದ ೧ ನೇ ತರಗತಿಯ ವರೆಗಿನ ವಿದ್ಯಾರ್ಥಿಗಳಿಗೆ ಚಿತ್ರ ಬಿಡಿಸಲು ವಿಷಯ ‘ನಮ್ಮ ಶಾಲೆಯ ಆಟದ ಮೈದಾನ’.

೨ನೇ ವಿಭಾಗ: ೨ನೇ ತರಗತಿಯಿಂದ ೬ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ವಿಷಯ ‘ಮಳೆಗಾಲದಲ್ಲಿ ಕೊಡಗು’.

೩ನೇ ವಿಭಾಗ: ೭ನೇ ತರಗತಿಯಿಂದ ೧೦ನೇ ತರಗತಿ ಯವರೆಗಿನ ವಿದ್ಯಾರ್ಥಿಗಳಿಗೆ ವಿಷಯ ‘ನೀರಿಗಾಗಿ ಹಾಹಾಕಾರ’. ಚಿತ್ರಕಲಾ ಸ್ಪರ್ಧೆಯ ನಂತರ ನಡೆಯುವ ಸಭಾ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಗುವುದು. ತೀರ್ಪುಗಾರರಾಗಿ ರಾಷ್ಟç ಪ್ರಶಸ್ತಿ ವಿಜೇತ ಚಿತ್ರ ಕಲಾವಿದೆ ಅಕ್ಷತಾ ಪಾಲ್ಗೊಳ್ಳಲಿದ್ದಾರೆ.

ಬಹುಮಾನ ವಿತರಣಾ ಸಮಾರಂಭ ಕಿರಿಕೊಡ್ಲಿ ಮಠದ ಪೀಠಾಧ್ಯಕ್ಷರಾದ ಶ್ರೀಸದಾಶಿವ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ನಗರಸಭಾ ಅಧ್ಯಕ್ಷೆ ಪಿ. ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ, ಸದಸ್ಯರಾದ ಸವಿತಾ ರಾಕೇಶ್, ಮಾಜಿ ಸದಸ್ಯ ಹೆಚ್.ಎಂ. ನಂದಕುಮಾರ್, ಹಿರಿಯ ವೈದ್ಯರಾದ ಡಾ. ಹೆಚ್.ವಿ. ದೇವದಾಸ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಡಾ. ಶಿಲ್ಪಾ ಸತೀಶ್ ಮಾಹಿತಿ ನೀಡಿದ್ದಾರೆ.

ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ನಡೆಸುತ್ತಿರುವ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.