ಸುಂಟಿಕೊಪ್ಪ, ನ. ೧೨: ಜೀವನದಲ್ಲಿ ಸಂಸ್ಕಾರ ಹಾಗೂ ಸಂಸ್ಕೃತಿಗಳನ್ನು ಅಳವಡಿಸಿಕೊಂಡು ನಡೆದುಕೊಳ್ಳುವವರೇ ನಿಜವಾದ ಪದವೀದÀರರು ಎಂದು ಕನ್ನಡ ಭಾರತಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಸತೀಶ್ ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾನ್‌ಬೈಲ್ ತಲಾಕಾವೇರಿ ಜ್ಞಾನ ವಿಕಾಸ ಕೇಂದ್ರದ ವತಿಯಿಂದ ಸಂಘದ ಸದಸ್ಯರಿಗೆ ಮಂಜಿಕೆರೆ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಪೋಷಕರೇ ಶಿಕ್ಷಕರು. ಮಕ್ಕಳು ೧೪ ವರ್ಷದವರೆಗೆ ಪೋಷಕರನ್ನು ಅನುಸರಿಸಿಕೊಂಡು ಮುನ್ನಡೆಯುತ್ತಾರೆ. ಆ ಸಂದರ್ಭದಲ್ಲಿ ಪೋಷಕರು ಮನೆಗಳಲ್ಲಿ ಅನ್ಯೋನ್ಯತೆ, ಉತ್ತಮ ವಾತಾವರಣವನ್ನು ನಿರ್ಮಿಸಿಕೊಟ್ಟಲ್ಲಿ ಮಾತ್ರ ಮಕ್ಕಳಿಂದ ಭವಿಷ್ಯವನ್ನು ಎದುರು ನೋಡಬಹುದಾಗಿದೆ.
ಮಕ್ಕಳು ಪ್ರೌಢಶಾಲೆಯನ್ನು ಮುಗಿಸಿ ಪದವಿ ಕಾಲೇಜುಗಳಿಗೆ ಸೇರುವ ಮುನ್ನ ಪೋಷಕರು ಮಕ್ಕಳೊಂದಿಗೆ ಚರ್ಚಿಸಿ ಮಕ್ಕಳ ಆಸಕ್ತಿ ಮತ್ತು ಅಭಿರುಚಿಯ ಬಗ್ಗೆ ಅರಿತು ಅಂತಹ ಶಿಕ್ಷಣಗಳಿಗೆ ಪ್ರೋತ್ಸಾಹಿಸಬೇಕು. ಇದರಿಂದ ಮಕ್ಕಳು ಸಂಪನ್ಮೂಲ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಾಧ್ಯವೆಂದು ಅವರು ನುಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಕಾನ್‌ಬೈಲ್ ಒಕ್ಕೂಟದ ಉಪಾಧ್ಯಕ್ಷೆ ಗೀತಾ, ಮಾಜಿ ಅಧ್ಯಕ್ಷೆ ಖತೀಜ, ಸೇವಾ ಪ್ರತಿನಿಧಿ ಯಶೋಧ ಇದ್ದರು. ಕನ್ನಿಕಾ, ಧೃತಿ, ಭೂಮಿಕ, ಭಗವತಿ ಮತ್ತು ಶ್ರೀನಿಧಿ ಸಂಘದ ಪದಾಧಿಕಾರಿಗಳು ಮಾಹಿತಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.