ಮಡಿಕೇರಿ, ನ. ೭: ತಾಯಿ ಮತ್ತು ಮಗಳ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿರುವ ಘಟನೆ ಮಾದಾಪುರ ಸಮೀಪದ ಜಂಬೂರಿನಲ್ಲಿ ನಡೆದಿದೆ.

ಜಂಬೂರು ನಿವಾಸಿ ಖತೀಜಾ ಹಾಗೂ ಅವರ ಮಗಳು ಶಕೀನ ಮೇಲೆ ಹಲ್ಲೆಯಾಗಿದ್ದು, ಖತೀಜಾ ಅವರ ಪುತ್ರನ ಪತ್ನಿಯ ಅಪ್ಪ, ಇರಿಟಿ ನಿವಾಸಿ ಅಲಿ (ಅಬು) ಹಲ್ಲೆ ನಡೆಸಿದ್ದಾರೆ ಎಂದು ಗಾಯಾಳುಗಳು ಆರೋಪಿಸಿ ಸೋಮವಾರಪೇಟೆ ಠಾಣೆಗೆ ದೂರು ನೀಡಿದ್ದಾರೆ. ಇದರನ್ವಯ ಪ್ರಕರಣ ದಾಖಲಾಗಿದೆ.

ಗುರುವಾರ ರಾತ್ರಿ ೧೦ ಗಂಟೆ ಸುಮಾರಿಗೆ ಖತೀಜಾ ಹಾಗೂ ಶಕೀನ ಮನೆಯಲ್ಲಿದ್ದ ಸಂದರ್ಭ ಬಾಗಿಲ ಬಡಿದ ಸದ್ದಾಗಿದೆ. ಈ ವೇಳೆ ಮುಸುಕುಧಾರಿ ಒಬ್ಬ ಏಕಾಏಕಿ ಮನೆಯೊಳಗೆ ನುಗ್ಗಿ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಶಕೀನ ಮುಸುಕು ತೆಗೆಯುವ ಪ್ರಯತ್ನ ನಡೆಸಿದಾಗ ಅದು ಅಲಿ ಎಂದು ತಿಳಿದು ಬಂದಿದೆ. ತಕ್ಷಣ ಆತ ಅಲ್ಲಿಂದ ಓಡಿ ಹೋಗಿ ಪರಾರಿಯಾಗಿದ್ದಾನೆ.

ಗಾಯಾಳುಗಳು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಖತೀಜಾ ಅವರ ಮಗ ಇರಿಟಿಯ ಕ್ರಶರ್‌ನಲ್ಲಿ ಕೆಲಸ ಮಾಡುವ ಸಂದರ್ಭ ಮೃತಪಟ್ಟಿದ್ದು, ಆತನ ಪತ್ನಿ ತನ್ನ ಮಕ್ಕಳೊಂದಿಗೆ ಖತೀಜಾ ಅವರ ಮನೆ ಬಳಿ ವಾಸವಿದ್ದರು. ಹಣಕಾಸು ವಿಚಾರಕ್ಕೆ ಈ ಘರ್ಷಣೆ ನಡೆದಿದೆ ಎಂದು ತಿಳಿದು ಬಂದಿದೆ. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿ, ಮಹಜರು ನಡೆಸಿ ಆರೋಪಿ ಪತ್ತೆಗೆ ತನಿಖೆ ಚುರುಕುಗೊಳಿಸಿದ್ದಾರೆ.