ಮಡಿಕೇರಿ, ನ. ೭: ಆರ್ಥಿಕ ಸಮಸ್ಯೆಗಳಿಗೆ ಮದುವೆಗಳು ಕಾರಣವಾಗುತ್ತಿರುವ ಹಿನ್ನೆಲೆ ಸುನ್ನಿ ಯುವಜನ ಸಂಘದ ವತಿಯಿಂದ ಮಾದರಿ ಮದುವೆ-ಶತದಿನ ಅಭಿಯಾನ ಎಂಬ ವಿನೂತನ ಕಾರ್ಯಕ್ರಮವನ್ನು ರಾಜ್ಯವ್ಯಾಪಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ. ಅಬೂಬಕರ್ ಸಿದ್ದೀಕ್ ಮಾಹಿತಿ ನೀಡಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮದುವೆ ಎಂಬುದು ಇಸ್ಲಾಂ ಧರ್ಮದಲ್ಲಿ ಶ್ರೇಷ್ಟ ಸತ್ಕರ್ಮವಾಗಿದ್ದು, ಅಪಾರ ಪುಣ್ಯ ಲಭಿಸುವ ಆರಾಧನೆಯೂ ಆಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ವರದಕ್ಷಿಣೆ, ಆಡಂಬರತನದಿAದ ಮದುವೆಗೆ ಹೆಚ್ಚಿನ ಪ್ರಮಾಣದಲ್ಲಿ ಹಣ ವ್ಯಯವಾಗುತ್ತಿದೆ. ಚಿನ್ನ ನೀಡುವುದು, ನಿಶ್ಚಿತಾರ್ಥ, ಮೆಹಂದಿ, ಹಳದಿ, ಅರಬಿಯನ್ಸ್ ನೈಟ್ಸ್ ಹೀಗೆ ಬೇರೆ ಬೇರೆ ಆಚರಣೆಗಳನ್ನು ಮಾಡಿಕೊಂಡು ಮದುವೆ ದುಬಾರಿಯಾಗಿ ಪರಿಣಮಿಸಿದೆ. ಇಸ್ಲಾಮ್ ಧರ್ಮದಲ್ಲಿ ಮದುವೆ ಸರಳವಾಗಿದೆ. ಇದೀಗ ಪರಿಸ್ಥಿತಿ ಬದಲಾಗಿದ್ದು, ಬಡಯುವಕರು ಮದುವೆಯಾಗಲು ಹಿಂಜರಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ಎಸ್‌ವೈಎಸ್ ಈ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ವಿವರಿಸಿದರು.

ತಾ. ೮ ರಂದು (ಇಂದು) ಎಮ್ಮೆಮಾಡಿನ ದರ್ಗಾದಲ್ಲಿ ಅಭಿಯಾನಕ್ಕೆ ಚಾಲನೆ ದೊರೆಯಲಿದೆ. ಮಾದರಿ ಮದುವೆ ಕ್ರಿಯಾ ಸಮಿತಿ ಸದಸ್ಯರು ೧೦೦ ದಿನಗಳು ರಾಜ್ಯವ್ಯಾಪಿ ಜಾಗೃತಿ ಮೂಡಿಸಿ ಸರಳ ವಿವಾಹಕ್ಕೆ ಪ್ರೇರಪಣೆ ಮಾಡಲಿದ್ದಾರೆ. ಬೆಳಿಗ್ಗೆ ೯ ಗಂಟೆಗೆ ನಡೆಯಲಿರುವ ಕಾರ್ಯಕ್ರಮ ಎಸ್‌ವೈಎಸ್ ರಾಜ್ಯಾಧ್ಯಕ್ಷ ಬಶೀರ್ ಸಅದಿ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಸುನ್ನಿ ಉಲಮಾ ಒಕ್ಕೂಟ ಜಿಲ್ಲಾಧ್ಯಕ್ಷ ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಉದ್ಘಾಟಿಸಲಿದ್ದಾರೆ. ಧಾರ್ಮಿಕ ಗುರು ಸಯ್ಯಿದ್ ವಿ.ಪಿ. ಅಬ್ದುಲ್ ರಹ್ಮಾನ್ ದಾರಿಮಿ, ಕಲ್ಲಿಕೋಟೆ ಮರ್ಕಝ್ ಉಪನ್ಯಾಸಕ ಹಾಫಿಝ್ ಕೌಸರ್ ಸಖಾಫಿ ಮುಖ್ಯ ಭಾಷಣ ಮಾಡಲಿದ್ದಾರೆ. ಕೂರ್ಗ್ ಜಂಇಯುತ್ತುಲ್ ಉಲಾಮ ನಾಯಕ ಸಯ್ಯಿದ್ ಇಲ್ಯಾಸ್ ತಂಞಳ್, ಎಮ್ಮೆಮಾಡು ದುರ್ಗಾಧ್ಯಕ್ಷ ಹುಸೈನ್ ಸಖಾಫಿ, ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಜಿಸಿಸಿ ಕಾರ್ಯದರ್ಶಿ ಇಸ್ಮಾಯಿಲ್ ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಎಸ್‌ವೈಎಸ್ ರಾಜ್ಯಾಧ್ಯಕ್ಷ ಬಶೀರ್ ಸಅದಿ, ಕೋಶಾಧಿಕಾರಿ ಮನ್ಸೂರ್ ಅಲಿ, ಮಾಜಿ ರಾಜ್ಯಾಧ್ಯಕ್ಷ ಅಬ್ದುಲ್ ಅಫೀಳ್ ಸಅದಿ, ಜಿಲ್ಲಾಧ್ಯಕ್ಷ ಮುನೀರ್ ಮುಹ್‌ಳರಿ, ಸದಸ್ಯ ಬಿ.ಯು. ಅಶ್ರಫ್ ಹಾಜರಿದ್ದರು.