ಕರಿಕೆ, ನ, ೮ : ಇಲ್ಲಿನ ಸ್ಥಳೀಯ ಗ್ರಾಮ ಪಂಚಾಯಿತಿ ವತಿಯಿಂದ ಅಳವಡಿಸಿದ್ದ ಸೋಲಾರ್ ಬೀದಿ ದೀಪ ಕಳ್ಳತನಕ್ಕೆ ಯತ್ನಿಸಿ ಹಾನಿಗೊಳಿಸಿದ ಘಟನೆ ನಡೆದಿದೆ. ಪಂಚಾಯಿತಿ ವತಿಯಿಂದ ರೂ. ೩೦,೦೦೦ ವೆಚ್ಚದಲ್ಲಿ ಚೆತ್ತುಕಾಯ ಎಸ್ ತಿರುವು ಬಳಿಯ ನಿರ್ಜನ ರಸ್ತೆ ಬದಿಯಲ್ಲಿ ಅಳವಡಿಸಿದ್ದ ಸೋಲಾರ್ ಬೀದಿ ದೀಪವನ್ನು ಕಳ್ಳತನ ಮಾಡಲು ಮುರಿದು ನೆಲಕ್ಕುರುಳಿಸಿ ಹೊತ್ತೊಹೊಯ್ಯಲು ಯತ್ನ ನಡೆಸಿದ ಸಂದರ್ಭ ಸ್ಥಳೀಯ ವನ್ಯಜೀವಿ ಅರಣ್ಯ ಸಿಬ್ಬಂದಿಗಳು ಬಂದ ಕಾರಣ ಕಳ್ಳರು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ. ಈ ಬಗ್ಗೆ ಪಂಚಾಯಿತಿ ವತಿಯಿಂದ ಪೊಲೀಸ್ ದೂರು ನೀಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲಚಂದ್ರ ನಾಯರ್ ಪಂಚಾಯಿತಿ ಆಸ್ತಿಯನ್ನು ಹಾನಿ ಮಾಡಿರುವವರ ವಿರುದ್ಧ ಕಠಿಣ ಕಾನೂನು ಕ್ರಮವಹಿಸಲು ಪೊಲೀಸ್ ಇಲಾಖೆಯನ್ನು ಆಗ್ರಹಿಸುವುದಾಗಿ ತಿಳಿಸಿದ್ದಾರೆ.