ಗೋಣಿಕೊಪ್ಪಲು, ನ.೭: ನೂತನ ತಾಲೂಕಿಗೊಂದು ಪ್ರಜಾಸೌಧದ ಕಟ್ಟಡ ನಿರ್ಮಾಣಗೊಳ್ಳುತ್ತಿದ್ದು ಬಹುನಿರೀಕ್ಷಿತ ಪೊನ್ನಂಪೇಟೆ ನೂತನ ತಾಲೂಕು ಕಚೇರಿಯ ನೂತನ ಕಟ್ಟಡ ನಿರ್ಮಾಣದ ಕಾಮಗಾರಿಗೆ ಕರ್ನಾಟಕ ರಾಜ್ಯ ಸರ್ಕಾರದ ಕಂದಾಯ ಸಚಿವ ಕೃಷ್ಣಬೈರೇಗೌಡ ಶಂಕು ಸ್ಥಾಪನೆ ನೆರವೇರಿಸಿದರು.

ಪೊನ್ನಂಪೇಟೆ ನೂತನ ತಾಲೂಕಿಗೆ ಪ್ರಜಾಸೌಧ ನಿರ್ಮಾಣಕ್ಕೆ ಅಗತ್ಯವಿದ್ದ ರೂ. ೮.೬೦ಕೋಟಿ ಅನುದಾನವನ್ನು ಮಂಜೂರು ಮಾಡಿಸುವಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಯಶಸ್ವಿಯಾಗಿದ್ದಾರೆ.

ಎ.ಎಸ್.ಪೊನ್ನಣ್ಣನವರ ವಿಶೇಷ ಆಸಕ್ತಿಯಿಂದ ಸರ್ಕಾರದ ವತಿಯಿಂದ ರೂ. ೮.೬೦ ಕೋಟಿ ಅನುದಾನ ಬಿಡುಗಡೆಯಾಗಿದ್ದು ಪ್ರಜಾಸೌಧ ಕಟ್ಟಡವು ಪ್ರಸ್ತುತವಿರುವ ತಹಶೀಲ್ದಾರ್ ಕಚೇರಿಯಲ್ಲಿಯೇ ನಿರ್ಮಾಣವಾಗಲಿದೆ. ೨ ಅಂತಸ್ತಿನ ನೂತನ ಕಟ್ಟಡವು ಮುಂದಿನ ವರ್ಷದ ಕೊನೆಯಲ್ಲಿ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ ಎಂದು ಸಚಿವ ಹಾಗೂ ಶಾಸಕರು ವಿಶ್ವಾಸ ವ್ಯಕ್ತಪಡಿಸಿದರು.

ಶಂಕುಸ್ಥಾಪನೆ ನೆರವೇರಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಸಚಿವ ಕೃಷ್ಣಬೈರೇಗೌಡ, ಶಾಸಕ ಎ.ಎಸ್.ಪೊನ್ನಣ್ಣನವರ ವಿಶೇಷ ಆಸಕ್ತಿಯಿಂದ ಪ್ರಜಾಸೌಧವನ್ನು ನಿರ್ಮಾಣ ಮಾಡಲು ಸರ್ಕಾರದ ವತಿಯಿಂದ ಅನುದಾನ ಬಿಡುಗಡೆಗೊಳಿಸಲಾಗಿದೆ. ಜನರ ಆಶೋತ್ತರಗಳನ್ನು ಈಡೇರಿಸುವುದು ಕಾಂಗ್ರೆಸ್ ಸರ್ಕಾರದ ಜವಾಬ್ದಾರಿಯಾಗಿದೆ. ನೂತನ ತಾಲೂಕಿಗೆ ಪ್ರಜಾಸೌಧ ಇದ್ದಲ್ಲಿ ಮಾತ್ರ ಜನರಿಗೆ ಅನುಕೂಲವಾಗುತ್ತದೆ ಎಂದರು.

ನಿವೇಶನದ ಕುರಿತು ಪರ ವಿರೋಧದ ಚರ್ಚೆಯ ನಂತರ ಪ್ರಸ್ತುತ ಇರುವ ಸ್ಥಳದಲ್ಲಿ ಕಟ್ಟಡ ನಿರ್ಮಾಣವಾಗಲಿದೆ. ಶಾಸಕ ಪೊನ್ನಣ್ಣ ಎಲ್ಲರ ವಿಶ್ವಾಸವನ್ನು ಗಳಿಸುವ ಮೂಲಕ ಸಹಮತ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜನರ ಭಾವನೆಯನ್ನು ಈಡೇರಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ೨೦೧೮-೧೯ನೇ ಸಾಲಿನಲ್ಲಿ ಇದ್ದಂತಹ ಸರ್ಕಾರ ೬೩ ಹೊಸ ತಾಲೂಕುಗಳನ್ನು ಘೋಷಣೆ ಮಾಡಿದೆ.

೧೪ ತಾಲೂಕು ಆಡಳಿತದ ಕಚೇರಿಗೆ ಮಾತ್ರ ಅನುದಾನವನ್ನು ೪ ವರ್ಷಗಳಲ್ಲಿ ಬಿಡುಗಡೆ ಮಾಡಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಎರಡೂವರೆ ವರ್ಷದಲ್ಲಿ ರಾಜ್ಯದ ೪೯ ಹೊಸ ತಾಲೂಕುಗಳಿಗೆ ಪ್ರಜಾಸೌಧ ಕಟ್ಟಡಕ್ಕೆ ಅನುದಾನ ಬಿಡುಗಡೆಗೊಳಿಸಲಾಗಿದೆ. ಮನಸಿದ್ದರೆ ಮಾರ್ಗ ಎಂಬುದಕ್ಕೆ ಇದೊಂದು ಉದಾಹರಣೆ, ಕೇವಲ ಗ್ಯಾರೆಂಟಿ ಯೋಜನೆಗೆ ಮಾತ್ರ ಸರ್ಕಾರದ ಹಣ ಖರ್ಚಾಗುತ್ತಿದೆ ಉಳಿದ ಯೋಜನೆಗಳಿಗೆ ಹಣ ಎಲ್ಲಿ ಎಂದು ಕೇಳುವವರಿಗೆ ಇದೇ ಉತ್ತರವಾಗಿದೆ.

ಜನರ ತೆರಿಗೆ ಹಣವನ್ನು ಪೋಲು ಮಾಡದಂತೆ ಎಚ್ಚರ ವಹಿಸುವ ಸಲುವಾಗಿ ರಾಜ್ಯದಲ್ಲಿ ಒಂದೇ ಮಾದರಿಯ ೨ ಅಂತಸ್ತಿನ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ೮.೬೦ಕೋಟಿ ಹಣವನ್ನು ಮೀಸಲಿಡಲಾಗಿದೆ. ಈ ಕಟ್ಟಡದಲ್ಲಿ ೪ ಅಂತಸ್ತು ಕಟ್ಟಡವನ್ನು ನಿರ್ಮಿಸಬಹುದಾಗಿದೆ. ಕಾಲ ಕಾಲಕ್ಕೆ ಜನರ ಅನುಕೂಲಕ್ಕಾಗಿ ಕಾಮಾಗಾರಿಯಾಗಿ ವಿಸ್ತರಿಸಲು ಈ ಯೋಜನೆಯಲ್ಲಿ ಅವಕಾಶ ನೀಡಲಾಗಿದೆ. ೧೭ ಸಾವಿರ ಚದರ ಅಡಿಯಲ್ಲಿ ನೂತನ ಕಟ್ಟಡ ನಿರ್ಮಾಣವಾಗಲಿದೆ ಎಂದು ತಿಳಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಮಾತನಾಡಿ ಪ್ರಜಾಸೌಧವು ಜನರ ಬಹು ನಿರೀಕ್ಷೆಯ ಯೋಜನೆಯಾಗಿತ್ತು. ಅಧಿಕಾರಕ್ಕೆ ಬರುತ್ತಿದ್ದಂತೆಯೇ ಈ ಬಗ್ಗೆ ಜನರಿಗೆ ಭರವಸೆ ನೀಡಲಾಗಿತ್ತು. ಎರಡೂವರೆ ವರ್ಷದಲ್ಲಿ ಯೋಜನೆಗೆ ಮಂಜೂರಾತಿ ನೀಡುವ ಮೂಲಕ ಅನುದಾನವನ್ನು ಕಂದಾಯ ಸಚಿವರು ನೀಡಿದ್ದಾರೆ.

ಆರ್ಥಿಕ ಶಿಸ್ತನ್ನು ಕಾಪಾಡುವ ಮೂಲಕ ಅಭಿವೃದ್ದಿ ಕಡೆಗೆ ಸಾಗುತ್ತಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುತ್ತಿದೆ. ಸರ್ಕಾರ ಕೇವಲ ಗ್ಯಾರೆಂಟಿ ಯೋಜನೆಗೆ ಸೀಮಿತಗೊಂಡಿಲ್ಲ. ಅಭಿವೃದ್ದಿಗೂ ಒತ್ತು ನೀಡುತ್ತಿದೆ. ಕ್ಷೇತ್ರದಲ್ಲಿ ಆಸ್ಪತ್ರೆಯ ನಿರ್ಮಾಣ, ಸೇರಿದಂತೆ ಹತ್ತಾರು ಕಾಮಗಾರಿಗಳಿಗೆ ಸರ್ಕಾರದಿಂದ ಅನುದಾನ ಮಂಜೂರಾಗಿದೆ. ಬಡವರಿಗಾಗಿ ೨ ಸಾವಿರ ನಿವೇಶನ ನೀಡುವ ಯೋಜನೆಯು ಪ್ರಗತಿಯಲ್ಲಿದ್ದು ೪ಏಳನೆ(ಮೊದಲ ಪುಟದಿಂದ) ಮುಖ್ಯಮಂತ್ರಿಗಳು ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ ಈ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರಲಾಗುತ್ತದೆ. ರಸ್ತೆ ವಿಚಾರವಾಗಿ ಬಹಳಷ್ಟು ಚರ್ಚೆಗಳು ನಡೆಯುತ್ತಿವೆ ಎಂದರು.

ರಸ್ತೆ ಅಭಿವೃದ್ದಿಗಾಗಿ ಮುಖ್ಯಮಂತ್ರಿಗಳ ವಿಶೇಷ ಅನುದಾನವು ಲಭ್ಯವಿದೆ. ಕಳೆದ ಮೇ ತಿಂಗಳಿನಿAದ ಅಕ್ಟೋಬರ್ ತಿಂಗಳವರೆಗೂ ಮಳೆ ಇದ್ದ ಕಾರಣ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಕೇವಲ ಆರೋಪ ಮಾಡಿದರೆ ಸಾಲದು ಸಮಸ್ಯೆಗಳನ್ನು ಕೂಡ ನಾಗರಿಕರು ಅರಿತುಕೊಳ್ಳಬೇಕು. ಕ್ಷೇತ್ರಕ್ಕೆ ಎರಡೂವರೆ ವರ್ಷದಲ್ಲಿ ನಿರೀಕ್ಷೆಗೂ ಮೀರಿ ಅನುದಾನವನ್ನು ತಂದಿರುವ ಬಗ್ಗೆ ತೃಪ್ತಿ ಹೊಂದಿದ್ದೇನೆ ಮುಂದೆಯೂ ಶಕ್ತಿ ಮೀರಿ ಕೆಲಸ ನಿರ್ವಹಿಸುತ್ತೇನೆ.

ಅಧಿಕಾರಿಗಳು ಪ್ರಜೆಗಳ ಸೇವಕರಾಗಿ ಕೆಲಸ ನಿರ್ವಹಿಸಬೇಕು. ಪ್ರಾಮಾಣಿಕತೆ, ಬದ್ದತೆ ಮೈಗೂಡಿಸಿಕೊಳ್ಳಬೇಕು. ಕಚೇರಿಗೆ ನಾಗರಿಕರು ಆಗಮಿಸಿದ ಸಂದರ್ಭ ಉತ್ತಮ ವಾತಾವರಣ ಇರಬೇಕು. ಜನರು ಆತಂಕದಿAದ ಕಚೇರಿಗೆ ಬರುವ ರೀತಿ ನಡೆದುಕೊಳ್ಳಬಾರದು ಎಂದು ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು.ನಾನು ಶಾಸಕನಾಗಿ ಹಣ ಮಾಡಲು ಬಂದಿಲ್ಲ. ಕ್ಷೇತ್ರದ ಅಭಿವೃದ್ದಿಗಾಗಿ ಬಂದಿದ್ದೇನೆ. ಮುಂದಿನ ವರ್ಷಾಂತ್ಯದಲ್ಲಿ ಉತ್ತಮ ರಸ್ತೆ ನಿರ್ಮಾಣವೂ ಕೂಡ ಆಗಲಿದೆ. ಇದರಲ್ಲಿ ಯಾರಿಗೂ ಅನುಮಾನ ಬೇಡ ಕೇವಲ ಟೀಕೆಗಳನ್ನೇ ಮಾಡುತ್ತಾ ಇದ್ದರೆ ಸಾಲದು ಅಭಿವೃದ್ದಿಯ ಕಡೆಗೂ ಜನ ನೋಡುವಂತಾಗಬೇಕು ಎಂದರು.

ವೇದಿಕೆಯಲ್ಲಿ ಕರ್ನಾಟಕ ಕ್ರೀಡಾಪ್ರಾಧಿಕಾರದ ಉಪಾಧ್ಯಕ್ಷ ಸಿ.ಎಸ್.ಅರುಣ್ ಮಾಚಯ್ಯ, ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಅಪರ ಜಿಲ್ಲಾಧಿಕಾರಿ ಐಶ್ವರ್ಯ, ಉಪವಿಭಾಗಾಧಿಕಾರಿ ನಿತಿನ್ ಚಕ್ಕಿ, ಪೊನ್ನಂಪೇಟೆ ತಹಶೀಲ್ದಾರ್ ಮೋಹನ್ ಕುಮಾರ್, ವೀರಾಜಪೇಟೆ ತಹಶೀಲ್ದಾರ್ ಪ್ರವೀಣ್, ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ತಾಲೂಕು ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ಅಕ್ರಮ ಸಕ್ರಮ ತಾಲೂಕು ಅಧ್ಯಕ್ಷ ಲಾಲಾ ಅಪ್ಪಣ್ಣ, ನೆರವಂಡ ಉಮೇಶ್, ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣಿರ ಹರೀಶ್, ಕಾಂಗ್ರೆಸ್ ಪಕ್ಷದ ಪ್ರಮುಖರುಗಳಾದ ಮಿದೇರಿರ ನವೀನ್, ತಾರಾ ಅಯ್ಯಮ್ಮ ಮೂಕಳೇರ ಕುಶಾಲಪ್ಪ, ಚೆಪ್ಪುಡೀರ ಬೋಪಣ್ಣ,ಆಲಿರ ರಶೀದ್, ಮೂಕಳೇರ ಸುಮಿತ ಗಣೇಶ್, ಕೊಳೇರ ಭಾರತಿ, ಶಾಜಿ ಅಚ್ಚುತ್ತನ್, ಜಮ್ಮಡ ಸೋಮಣ್ಣ, ಕುಲ್ಲಚಂಡ ಪ್ರಮೋದ್ ಗಣಪತಿ, ಮುಕ್ಕಾಟಿರ ಸಂದೀಪ್, ನಾಯಂದರ ಶಿವಾಜಿ,ಇಸ್ಮಾಯಿಲ್, ಕಡೇಮಾಡ ಕುಸುಮ, ನೂರೆರ ಧನ್ಯ ರವೀಂದ್ರ, ಅಬ್ದುಲ್ ಸಮ್ಮದ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ.ಕೇಶವ್ ಕಾಮತ್, ನಾಗರಿಕ ಸಮಿತಿಯ ಅಪ್ಪಚ್ಚು, ಕಿಗ್ಗಟ್ಟ್ನಾಡ್ ಸಮಿತಿಯ ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಕಂದಾಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ತಾಲೂಕು ಪಂಚಾಯಿತಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ತಾಲೂಕು ಆಡಳಿತ ವತಿಯಿಂದ ತಹಶೀಲ್ದಾರ್ ಮೋಹನ್ ಕುಮಾರ್, ಪೊನ್ನಂಪೇಟೆ ನಾಗರಿಕ ವೇದಿಕೆಯ ಎರ್ಮು ಹಾಜಿ ಹಾಗೂ ಚೊಟ್ಟೆಯಂಡಮಾಡ ವಿಶ್ವನಾಥ್‌ಬೋಸ್ ಕಂದಾಯ ಸಚಿವರಾದ ಕೃಷ್ಣಬೈರೇಗೌಡ ಹಾಗೂ ಶಾಸಕ ಪೊನ್ನಣ್ಣನವರಿಗೆ ಸನ್ಮಾನ ಮಾಡಿ ಗೌರವಿಸಿದರು. ಸಿ.ವಿ.ಅನ್ವೀತ್ ಕುಮಾರ್ ಪ್ರಾರ್ಥಿಸಿ,ನಾಡಗೀತೆ ಹಾಡಿದರು. ಟಿ.ಸಿ.ಗೀತಾನಾಯ್ಡು ಸ್ವಾಗತಿಸಿ

ವಂದಿಸಿದರು. -ಹೆಚ್.ಕೆ.ಜಗದೀಶ್