ಮಡಿಕೇರಿ, ನ. ೮: ಅವೈಜ್ಞಾನಿಕ ರಸ್ತೆ ಕಾಮಗಾರಿಯನ್ನು ವಿರೋಧಿಸಿ ಮಹಿಳೆಯೊಬ್ಬರು ಕಾರು ಅಡ್ಡಗಟ್ಟಿ ಕೆಲಸಕ್ಕೆ ತಡೆಯೊಡ್ಡಿದ ಘಟನೆ ನಗರದಲ್ಲಿ ನಡೆದಿದೆ.
ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಮಹಿಳೆಯ ಮನವೊಲಿಸಿದರಾದರೂ, ಜಗ್ಗದ ಮಹಿಳೆ ಸ್ಥಳಕ್ಕೆ ಬಂದ ನಗರಸಭಾ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು. ನಗರಸಭಾಧ್ಯಕ್ಷರು ಸ್ಥಳಕ್ಕೆ ಬಂದು ಅಹವಾಲು ಆಲಿಸಿದರು.
ಭಗವತಿ ನಗರದಿಂದ ಕಾನ್ವೆಂಟ್ ಜಂಕ್ಷನ್ ಸಂಪರ್ಕಿಸುವ ಮಾರ್ಗದಲ್ಲಿ ಈಗಾಗಲೇ ಅರ್ಧಕ್ಕೆ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದ್ದು, ಉಳಿದ ಭಾಗದಲ್ಲಿ ಅರ್ಧ ರಸ್ತೆಗೆ ಮಾತ್ರ ಕಾಯಕಲ್ಪ ನೀಡಲಾಗುತ್ತಿದೆ. ಪೂರ್ಣ ರಸ್ತೆಗೆ ಕಾಯಕಲ್ಪ ನೀಡಬೇಕು ಹಾಗೂ ಚರಂಡಿ ನಿರ್ಮಿಸಬೇಕೆಂದು ಸ್ಥಳೀಯ ನಿವಾಸಿ ನಾಗವೇಣಿ ಎಂಬವರು ಹಳೆಯ ರಸ್ತೆಯನ್ನು ತೆರವುಗೊಳಿಸುತ್ತಿದ್ದ ಜೆಸಿಬಿಗೆ ಅಡ್ಡಲಾಗಿ ಕಾರು ನಿಲ್ಲಿಸಿ ಸ್ಥಳಕ್ಕೆ ಪೌರಾಯುಕ್ತರು ಬರಬೇಕೆಂದು ಪಟ್ಟುಹಿಡಿದರು.
ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು, ಮಹಿಳೆಯ ಮನವೊಲಿಸಲು ವಿಫಲ ಪ್ರಯತ್ನ ಮಾಡಿದರು. ವೈಜ್ಞಾನಿಕ ಕಾಮಗಾರಿಯ ಭರವಸೆ ಸಿಗುವವರೆಗೂ ತಾನು ಕಾರು ತೆಗೆಯುವುದಿಲ್ಲ ಎಂದು ಪಟ್ಟುಹಿಡಿದರು. ಇದೇ ವೇಳೆ ಸ್ಥಳಕ್ಕಾಗಮಿಸಿದ ಸದಸ್ಯ ಅರುಣ್ ಶೆಟ್ಟಿ ಅವರನ್ನು ಕೂಡ ನಾಗವೇಣಿ ಪ್ರಶ್ನಿಸಿದರು. ಇಬ್ಬರ ಮಧ್ಯೆ ಮಾತಿನ ಚಕಮಕಿಯೂ ನಡೆಯಿತು.
ರಸ್ತೆಯ ಇಕ್ಕೆಲಗಳಲ್ಲೂ ಸದ್ಯಕ್ಕೆ ನೀರು ನಿಲ್ಲದಂತೆ ತಾತ್ಕಾಲಿಕ ಚರಂಡಿ ನಿರ್ಮಿಸಲಾಗಿದ್ದು, ಶೀಘ್ರದಲ್ಲೇ ಪೂರ್ಣ ಪ್ರಮಾಣದ ಚರಂಡಿ ನಿರ್ಮಿಸಿಕೊಡುವುದಾಗಿ ಅರುಣ್ ಶೆಟ್ಟಿ ಭರವಸೆ ನೀಡಿದರು. ಅಲ್ಲದೆ, ಇನ್ನೂ ಒಂದು ವರ್ಷ ಅಧಿಕಾರಾವಧಿಯಿರುವುದರಿಂದ ಉಳಿದ ರಸ್ತೆ ಕಾಮಗಾರಿಗೆ ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.
ಬಳಿಕ ಪೊಲೀಸರ ಮನವಿ ಮೇರೆಗೆ ಮಹಿಳೆ ರಸ್ತೆಯಿಂದ ಕಾರನ್ನು ತೆರವುಗೊಳಿಸಿದರು. ಶಾಸಕರ ನಿಧಿಯ ರೂ. ೫ ಲಕ್ಷದಲ್ಲಿ ಅರ್ಧ ಭಾಗಕ್ಕೆ ಕಾಂಕ್ರೀಟ್ ರಸ್ತೆ ಮಾಡಲಾಗಿದ್ದು, ಉಳಿದ ಕಾಮಗಾರಿಯ ಪೈಕಿ ಅರ್ಧ ಭಾಗಕ್ಕೆ ನಗರಸಭಾ ನಿಧಿಯಿಂದ ೫ ಲಕ್ಷ ಬಳಸಿಕೊಳ್ಳಲಾಗುತ್ತಿದೆ ಎಂದು ಅರುಣ್ ಶೆಟ್ಟಿ ವಿವರಿಸಿದರು.
ಚರಂಡಿ ಹಾಗೂ ಉಳಿದ ರಸ್ತೆ ದುರಸ್ತಿಗೆ ಅನುದಾನ ಬಿಡುಗಡೆಯಾದ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ನಗರಸಭೆಗೆ ೩ ಕೋಟಿ ಅನುದಾನ ನೀಡುವುದಾಗಿ ಶಾಸಕರು ಭರವಸೆ ನೀಡಿದ್ದಾರೆ. ಇದರಲ್ಲಿ ತಮ್ಮ ವಾರ್ಡ್ಗೆ ಹಣ ಸಿಗುವ ವಿಶ್ವಾಸವಿದೆ ಎಂದರು.
ಅರುಣ್ ಶೆಟ್ಟಿ ಕೋರಿಕೆ ಮೇರೆಗೆ ಸ್ಥಳಕ್ಕೆ ನಗರಸಭಾಧ್ಯಕ್ಷೆ ಕಲಾವತಿ ಭೇಟಿ ನೀಡಿ, ಹೆಚ್ಚುವರಿ ಅನುದಾನ ದೊರೆತ ತಕ್ಷಣ ಉಳಿದ ಕಾಮಗಾರಿಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.