ಸೋಮವಾರಪೇಟೆ, ನ. ೫: ಸಮೀಪದ ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಲಕನೂರು, ಹೊಸಳ್ಳಿ ಭಾಗದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ಸ್ಥಳೀಯರಿಗೆ ತೀವ್ರ ತೊಂದರೆಯಾಗಿದೆ. ಇದರೊಂದಿಗೆ ನಿಯಮಾವಳಿಗಳನ್ನು ಮೀರಿ ಗಣಿಗಾರಿಕೆ ಮಾಡಲಾಗುತ್ತಿದೆ ಎಂದು ಆರೋಪ ವ್ಯಕ್ತವಾದ ಹಿನ್ನೆಲೆ ಅಧಿಕಾರಿಗಳು ಎರಡನೇ ಬಾರಿಗೆ ಸ್ಥಳ ಪರಿಶೀಲನೆ ನಡೆಸಿದರು.
ಈ ಭಾಗದಲ್ಲಿ ಅವ್ಯಾಹತವಾಗಿ ಕಲ್ಲುಗಣಿಗಾರಿಕೆ ನಡೆಯುತ್ತಿದೆ. ಧೂಳಿನಿಂದ ಇಡೀ ಪ್ರದೇಶ ಆವೃತ್ತವಾಗಿದ್ದು, ಸ್ಥಳೀಯರು ಬದುಕುವುದೇ ಕಷ್ಟಕರವಾಗಿದೆ. ಇದರೊಂದಿಗೆ ಸರ್ಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿ ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿ, ಅಧಿಕಾರಿಗಳ ಗಮನ ಸೆಳೆದಿದ್ದರು.
ಈ ಹಿನ್ನೆಲೆ ಕಂದಾಯ, ಅರಣ್ಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮಾತನಾಡಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಸಂದೀಪ್, ಈ ಹಿಂದೆ ಪರಿಶೀಲನೆ ಸಂದರ್ಭ ಗಣಿಗಾರಿಕೆ ಸ್ಥಳದಲ್ಲಿ ಕೆಲವೊಂದು ನ್ಯೂನತೆಗಳು ಕಂಡುಬAದಿತ್ತು. ಅವುಗಳನ್ನು ಸರಿಪಡಿಸಲು ಕಾಲಾವಕಾಶ ನೀಡಲಾಗಿತ್ತು. ಇದೀಗ ನ್ಯೂನತೆಗಳನ್ನು ಸರಿಪಡಿಸಲಾಗಿದೆ ಎಂದು ಇಲಾಖೆಗೆ ವರದಿ ನೀಡಿದ ಹಿನ್ನೆಲೆ ಮತ್ತೊಮ್ಮೆ ಸ್ಥಳ ಪರಿಶೀಲನೆಗೆ ಆಗಮಿಸಿರುವುದಾಗಿ ತಿಳಿಸಿದರು.
ಇದರೊಂದಿಗೆ ಸಾರ್ವಜನಿಕರಿಂದಲೂ ಅಹವಾಲುಗಳಿದ್ದು, ಅವುಗಳನ್ನೂ ಆಲಿಸಲಾಗುವುದು ಎಂದ ಅವರು, ಈ ಪ್ರದೇಶದಲ್ಲಿ ಕಲ್ಲುಗಣಿಗಾರಿಕೆಗೆ ಅನುಮತಿ ಪಡೆಯಲಾಗಿದೆ. ಆದರೆ ಒತ್ತುವರಿಯೂ ಆಗಿರುವ ಬಗ್ಗೆ ತಿಳಿದುಬಂದಿದೆ. ನ್ಯೂನತೆಗಳು ಕಂಡುಬAದಿದೆ. ಕೆಲವೊಂದು ನಿಯಮಗಳನ್ನು ಮೀರಿರುವುದು ತಿಳಿದುಬಂದಿದೆ. ಈ ಎಲ್ಲವುಗಳ ಬಗ್ಗೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು.
ಈ ಸಂದರ್ಭ ಸ್ಥಳೀಯರು ಮಾತನಾಡಿ ಅಧಿಕಾರಿಗಳು ಕಾಟಾಚಾರಕ್ಕೆ ಮಾತ್ರ ಬಂದಿದ್ದಾರೆ. ಅಧಿಕಾರಿಗಳು ಎಲ್ಲಾ ದಾಖಲಾತಿಗಳನ್ನು ತಂದಿಲ್ಲ. ಕಲ್ಲುಕೋರೆಗಳ ಮಾಲೀಕರೂ ಸಹ ಸೂಕ್ತ ದಾಖಲೆಗಳನ್ನು ಅಧಿಕಾರಿಗಳಿಗೆ ನೀಡಿಲ್ಲ. ನೆಪಮಾತ್ರಕ್ಕೆ ಕೆಲವೆಡೆ ಬೇಲಿ ಹಾಕಿದ್ದಾರೆ. ಲೋಪಗಳನ್ನು ಸರಿಪಡಿಸಿಲ್ಲ. ಅಕ್ರಮ ಎಸಗಿದವರ ವಿರುದ್ಧ ಕ್ರಮವಾಗಬೇಕು. ನಿಯಮ ಮೀರಿರುವ ಕೋರೆ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಬೇಕು. ಈವರೆಗೆ ಆಗಿರುವ ತೆರಿಗೆ ವಂಚನೆಯನ್ನು ತನಿಖೆ ನಡೆಸಿ, ಸರ್ಕಾರಕ್ಕೆ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ವಲಯ ಅರಣ್ಯಾಧಿಕಾರಿ ಶೈಲೇಂದ್ರಕುಮಾರ್, ಕಂದಾಯ ಇಲಾಖಾ ಅಧಿಕಾರಿಗಳಾದ ಪ್ರಹ್ಲಾದ್, ಶ್ವೇತಾ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ರೋಜಾ, ಸ್ಥಳೀಯರಾದ ಬೋಜೇಗೌಡ, ಸಚಿನ್ ರಾಜೇಶ್, ಕಿರಣ್, ಅಭಿಲಾಷ್, ಮೋನಿಶ್, ಸಿಂಧ್ಯಾ, ಅನಿಲ್, ನಯನ, ಚಂದನ್, ರುಕೇಶ್, ಪ್ರೇಮ್‌ನಾಥ್ ಸೇರಿದಂತೆ ಇತರರು ಇದ್ದರು.