ಮಡಿಕೇರಿ, ನ. ೫ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಪನಿರ್ದೇಶಕರ ಕಚೇರಿ, ಶಾಲಾ ಶಿಲಾ ಶಿಕ್ಷಣ ಇಲಾಖೆ ಕೊಡಗು ಜಿಲ್ಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ವೀರಾಜಪೇಟೆ ತಾಲೂಕು ಹಾಗೂ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್, ಮಿಲನ್ಸ್ ಫುಟ್ಬಾಲ್ ಕ್ಲಬ್ ಅಮ್ಮತ್ತಿ ಇವರ ಸಹಯೋಗದೊಂದಿಗೆ ಅಮ್ಮತ್ತಿಯ ಪ್ರೌಢಶಾಲಾ ಮೈದಾನದಲ್ಲಿ ಮೈಸೂರು ವಿಭಾಗ ಮಟ್ಟ ಮತ್ತು ರಾಜ್ಯಮಟ್ಟದ ೧೪ ಮತ್ತು ೧೭ ವರ್ಷ ವಯೋಮಾನದ ಬಾಲಕ, ಬಾಲಕಿಯರ ಫುಟ್ಬಾಲ್ ಪಂದ್ಯಾವಳಿ ತಾ. ೬ರಿಂದ (ಇಂದಿನಿAದ) ತಾ. ೧೦ರವರೆಗೆ ನಡೆಯಲಿದೆ.

ಇದೇ ಮೊದಲ ಬಾರಿಗೆ ವೀರಾಜಪೇಟೆ ತಾಲೂಕಿನ ರಾಜ್ಯಮಟ್ಟದ ೧೪ ಮತ್ತು ೧೭ ವರ್ಷ ವಯೋಮಾನದ ಬಾಲಕ ಮತ್ತು ಬಾಲಕಿಯರ ಫುಟ್ಬಾಲ್ ಪಂದ್ಯಾವಳಿ ನಡೆಯುತ್ತಿದೆ.

ತಾ. ೬ ಮತ್ತು ೭ರಂದು ಮೈಸೂರು ವಿಭಾಗಮಟ್ಟದ ೧೪ ಮತ್ತು ೧೭ ವರ್ಷ ವಯೋಮಾನದ ಬಾಲಕ ಮತ್ತು ಬಾಲಕಿಯರ ಫುಟ್ಬಾಲ್ ಪಂದ್ಯಾವಳಿ ನಡೆಯಲಿದೆ.

ಮೈಸೂರು ವಿಭಾಗಮಟ್ಟದಲ್ಲಿ ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಯ ತಂಡಗಳು ಭಾಗವಹಿಸಲಿದೆ.

ಮೈಸೂರು ವಿಭಾಗ ಮಟ್ಟದಲ್ಲಿ ಗೆಲುವು ಸಾಧಿಸುವ ತಂಡಗಳು ತಾ. ೮ ರಿಂದ ೧೦ರವರೆಗೆ ನಡೆಯಲಿರುವ ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಮೈಸೂರು ವಿಭಾಗವನ್ನು ಪ್ರತಿನಿಧಿಸಲಿದೆ.

ಮೈಸೂರು ವಿಭಾಗ ಮಟ್ಟದ ಬಾಲಕ ಮತ್ತು ಬಾಲಕಿಯರ ಪಂದ್ಯಗಳು ಮಧ್ಯಾಹ್ನ ೧ ಗಂಟೆಗೆ ಆರಂಭಗೊಳ್ಳಲಿದೆ.

ವಿಭಾಗಮಟ್ಟದ ಪಂದ್ಯಗಳು ನಾಕೌಟ್ ಮಾದರಿಯಲ್ಲಿ ನಡೆಯಲಿವೆ. ತಾ. ೭ರಿಂದ ಎಲ್ಲಾ ಪಂದ್ಯಗಳು ಬೆಳಿಗ್ಗೆ ೬.೩೦ ಗಂಟೆಯಿAದ ಆರಂಭಗೊಳ್ಳಲಿದೆ.

ರಾಜ್ಯಮಟ್ಟದ ಪಂದ್ಯ

ತಾ. ೮ ರಿಂದ ೧೦ರವರೆಗೆ ಅಮ್ಮತ್ತಿ ಪ್ರೌಢಶಾಲಾ ಮೈದಾನದಲ್ಲಿ ೧೪ ಮತ್ತು ೧೭ ವರ್ಷ ವಯೋಮಾನದ ಬಾಲಕ ಮತ್ತು ಬಾಲಕಿಯರ ರಾಜ್ಯಮಟ್ಟದ ಫುಟ್ಬಾಲ್ ಪಂದ್ಯಾವಳಿ ನಡೆಯಲಿದೆ.

ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಬಾಲಕರ ವಿಭಾಗದಲ್ಲಿ ಐದು ಹಾಗೂ ಬಾಲಕಿಯರ ವಿಭಾಗದಲ್ಲಿ ನಾಲ್ಕು ವಿಭಾಗಗಳು ಸೆಣೆಸಾಟ ನಡೆಸಲಿವೆ.

ಬಾಲಕರ ವಿಭಾಗದಲ್ಲಿ ಮೈಸೂರು, ಕಲಬುರ್ಗಿ ,ಬೆಳಗಾವಿ, ಬೆಂಗಳೂರು ಹಾಗೂ ಡಿವೈಎಸ್ ವಿಭಾಗದ ತಂಡಗಳು ಭಾಗವಹಿಸಲಿವೆ.

ಬಾಲಕಿಯರ ವಿಭಾಗದಲ್ಲಿ ಮೈಸೂರು, ಕಲಬುರ್ಗಿ ,ಬೆಳಗಾವಿ ಹಾಗೂ ಬೆಂಗಳೂರು ತಂಡಗಳು ಭಾಗವಹಿಸಲಿವೆ.

ರಾಜ್ಯಮಟ್ಟದ ಪಂದ್ಯಾವಳಿ ಲೀಗ್ ಮಾದರಿಯಲ್ಲಿ ನಡೆಯಲಿದ್ದು, ಬಾಲಕರ ತಂಡವು ಲೀಗ್ ಹಂತದಲ್ಲಿ ನಾಲ್ಕು ಪಂದ್ಯ ಹಾಗೂ ಬಾಲಕಿಯರ ತಂಡಗಳು ಮೂರು ಪಂದ್ಯವನ್ನು ಆಡಲಿವೆ.

ಲೀಗ್ ಹಂತದಲ್ಲಿ ಟೇಬಲ್ ಟಾಪರ್ ಪಡೆಯುವ ತಂಡಗಳು ಚಾಂಪಿಯನ್ ಪ್ರಶಸ್ತಿ ಪಡೆದು, ರಾಷ್ಟçಮಟ್ಟಕ್ಕೆ ಅರ್ಹತೆ ಪಡೆಯಲಿವೆ.