ಸುಂಟಿಕೊಪ್ಪ, ನ. ೪: ಇಲ್ಲಿನ ಇಮ್ಯಾನ್‌ವೆಲ್ ದೇವಾಲಯದಲ್ಲಿ ವಾರ್ಷಿಕ ಬೆಳೆ ಹಬ್ಬ ಶ್ರದ್ಧಾಭಕ್ತಿಯಿಂದ ನೆರವೇರಿತು. ದೇವಾಲಯ ಹಾಗೂ ಆವರಣವನ್ನು ಕಬ್ಬು, ಭತ್ತದ ಪೈರು, ಪುಷ್ಪ ಇನ್ನಿತರ ಫಲ ವಸ್ತುಗಳಿಂದ ಸಿಂಗರಿಸಲಾಗಿತ್ತು.
ಕಾರ್ಯಕ್ರಮಕ್ಕೆ ಸುಂಟಿಕೊಪ್ಪ ಸಭಾಪಾಲಕರಾದ ಮಧುಕಿರಣ್ ಪಾಲ್ಗೊಂಡು ಧಾರ್ಮಿಕ ವಿಧಿವಿಧಾನಗಳೊಂದಿಗೆ ಪ್ರಾರ್ಥನೆ ಆಶೀರ್ವಚನ ನೀಡಿದರು.
ಈ ಸಂದರ್ಭ ಮಾತನಾಡಿದ ಉಡುಪಿ ಜಿಲ್ಲೆಯ ಅಂಬಾಡಿ ಸಿಎಸ್‌ಐ ದೇವಾಲಯದ ಅಕ್ಷಯ್ ಅಮ್ಮಣ್ಣ, ದೇವಾಲಯಗಳ ವಾರ್ಷಿಕ ವಿಧಿವಿಧಾನಗಳಲ್ಲಿ ಬೆಳೆ ಹಬ್ಬವು ಪ್ರಮುಖವಾಗಿದ್ದು, ಸತ್ಯವೇದ ಅಥವಾ ಬೈಬಲಿನ ಪ್ರಕಾರ ಭಕ್ತರು ತಾವು ಬೆಳೆದ ಕೃಷಿ ಉತ್ಪನ್ನ ಮತ್ತು ಫಲವಸ್ತುಗಳನ್ನು ಮೊದಲ ಕಾಣಿಕೆಯಾಗಿ ದೇವರಿಗೆ ಸಮರ್ಪಿಸುವುದು ಒಂದು ಪದ್ಧತಿ ಮತ್ತು ನಂಬಿಕೆಯ ನಡವಳಿಕೆಯಾಗಿದೆ. ಇದರ ಮೂಲಕ ನಮ್ಮನ್ನು ನಾವು ದೇವರಿಗೆ ಪುನರಾವರ್ತಿ ಕಾಣಿಕೆಯಾಗಿ ಸರ್ಮಪಿಸಿಕೊಳ್ಳುವದಾಗಿದೆ ಎಂದರು.
ಬೆಳೆಹಬ್ಬವು ಪ್ರಾತಃಕಾಲದ ಪ್ರಾರ್ಥನೆ ಮತ್ತು ಪೂಜಾ ವಿಧಿ ವಿಧಾನಗಳನ್ನು ಅಕ್ಷಯ್ ಅಮ್ಮಣ್ಣ ಮತ್ತು ಸುಂಟಿಕೊಪ್ಪ ಇಮ್ಯಾನುವೆಲ್ ದೇವಾಲಯದ ಸಭಾಪಾಲಕರಾದ ಮಧುಕಿರಣ್ ನೆರವೇರಿಸಿದರು. ಭಕ್ತಾದಿಗಳು ದೇವಾಲಯಕ್ಕೆ ಕಾಣಿಕೆಯಾಗಿ ನೀಡಿದ ವಿವಿಧ ಫಲ ವಸ್ತುಗಳ ಹರಾಜು ಪ್ರಕ್ರಿಯೆ ನಡೆದ ನಂತರ ಸಾಮೂಹಿಕ ಭೋಜನದೊಂದಿಗೆ ಸಂಜೆಯವರೆಗೂ ಆಟೋಟ ಸ್ಪರ್ಧೆಗಳು ನಡೆದು ಬಹುಮಾನ ವಿತರಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.