ಮಡಿಕೇರಿ, ನ. ೪: ಮಡಿಕೇರಿ- ಮಂಗಳೂರು ಹೆದ್ದಾರಿಯ ಕಾಟಕೇರಿ ಬಳಿ ಡಸ್ಟರ್ ಕಾರೊಂದು ಬೆಂಕಿಗೆ ಆಹುತಿಯಾಗಿದೆ. ಮೂಲತಃ ಮೈಸೂರಿನವರಾದ ಶೋಯೆಬ್ ಮತ್ತು ಕುಟುಂಬಸ್ಥರು ಮಂಗಳೂರಿಗೆ ತೆರಳಿದ್ದು, ಇಂದು ಸಂಜೆ ವೇಳೆಗೆ ಮೈಸೂರಿಗೆ ವಾಪಸ್ಸಾಗುತ್ತಿದ್ದ ವೇಳೆ ಕಾಟಕೇರಿ ಇಳಿಜಾರಿನಲ್ಲಿ ಕಾರಿನ ಬಾನೆಟ್‌ನಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ್ದಾರೆ. ಎಚ್ಚೆತ್ತುಕೊಂಡ ಕಾರಿನಲ್ಲಿದ್ದವರು ಕೂಡಲೇ ಕಾರನ್ನು ರಸ್ತೆ ಬದಿ ನಿಲ್ಲಿಸಿ ಕಾರಿನಿಂದ ಇಳಿದಿದ್ದಾರೆ.

ನೋಡ ನೋಡುತ್ತಲೇ ಕಾರಿನಲ್ಲಿ ಬೆಂಕಿಯ ಜ್ವಾಲೆ ಆವರಿಸಿಕೊಂಡಿದೆ. ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ. ವಿಷಯ ತಿಳಿಸಿದ ಮೇರೆಗೆ ಅಗ್ನಿಶಾಮಕದಳದವರು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಕಾರು ಸುಟ್ಟು ಕರಕಲಾಗಿತ್ತು. ತಾಂತ್ರಿಕ ದೋಷದಿಂದಾಗಿ ಕಾರಿನಲ್ಲಿ ಬೆಂಕಿ ಆವರಿಸಿಕೊಂಡಿದ್ದಾಗಿ ಹೇಳಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.