ಮಡಿಕೇರಿ, ನ. ೪: ಲೋಕಾಯುಕ್ತ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಡಿಕೇರಿ ತಾಲೂಕು ಚೇರಂಬಾಣೆ ವೃತ್ತ ವತಿಯಿಂದ ಭ್ರಷ್ಟಾಚಾರದ ವಿರುದ್ಧ ಜಾಗೃತ ಅರಿವು ಸಪ್ತಾಹ ಮತ್ತು ನಿವೃತ್ತ ಅಂಗನವಾಡಿ ಕಾರ್ಯಕರ್ತರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.

ಲೋಕಾಯುಕ್ತ ಇಲಾಖೆಯಿಂದ ಶ್ರೀಮತಿ ದೀಪಿಕಾ ಶೆಟ್ಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು ಸಾರ್ವಜನಿಕರಿಗೆ ಸರ್ಕಾರಿ ಕಚೇರಿಗಳಲ್ಲಿ ಯಾವುದೇ ಸಂಸ್ಥೆಗಳಲ್ಲಿ ಯಾವುದೇ ರೀತಿಯ ಕೆಲಸ ಮಾಡಲು ಲಂಚದ ಹಣಕ್ಕಾಗಿ ಒತ್ತಾಯಿಸಿದಲ್ಲಿ ಅಥವಾ ಲಂಚದ ರೂಪದಲ್ಲಿ ಬೇರೆ ಪ್ರತಿಫಲ ಪಡೆದಲ್ಲಿ, ಸಾರ್ವಜನಿಕ ಹುದ್ದೆಯನ್ನು ಬಳಸಿಕೊಂಡು ಬೇರೆ ರೀತಿಯ ಅವ್ಯವಹಾರಗಳನ್ನು ಮಾಡಿದ್ದಲ್ಲಿ, ಅರ್ಜಿಗಳ ವಿಲೆ ಮಾಡುವಲ್ಲಿ ಅನಗತ್ಯ ವಿಳಂಬ, ಸರ್ಕಾರಿ ಹಣದ ದುರುಪಯೋಗ ಕಳಪೆ ಕಾಮಗಾರಿ ಇತÀರ ಯಾವುದೇ ರೀತಿಯ ಭ್ರಷ್ಟಾಚಾರದ ದೂರುಗಳಿದ್ದಲ್ಲಿ ಮಡಿಕೇರಿಯ ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಲಿಖಿತವಾಗಿ ಅಥವಾ ಫೋನ್ ಮೂಲಕ ಹಾಗೂ ಇಮೇಲ್ ಮೂಲಕ ದೂರುಗಳನ್ನು ನೀಡಬಹುದಾಗಿ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇðಶಕರ ಪ್ರಸನ್ನ ಕುಮಾರ್ ಮಾತನಾಡುತ್ತಾ ಸಮುದಾಯದ ಜನರಿಗೆ ಅರಿವು ಮೂಡಿಸುವ ಕಾರ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಹಿರಿಯದಾಗಿದ್ದು ಸಭೆಗಳ ಮೂಲಕ ಭ್ರಷ್ಟಾಚಾರ ತಡೆಯುವ ನಿಟ್ಟಿನಲ್ಲಿ ಅರಿವು ಮೂಡಿಸಬೇಕಾಗಿ ತಿಳಿಸಿದರು. ಅಂಗನವಾಡಿಗಳಲ್ಲೂ ಕೂಡ ನಿಯಮಾನಸಾರ ಕರ್ತವ್ಯ ನಿರ್ವಹಿಸುವುದು, ಆಹಾರಗಳನ್ನು ಸರಿಯಾದ ಸಮಯದಲ್ಲಿ ಫಲಾನುಭವಿಗಳಿಗೆ ವಿತರಿಸುವ ಕಾರ್ಯಗಳಲ್ಲಿ ತೊಡಗಲು ತಿಳಿಸಿದರು.

ಪ್ರಬಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಭ್ರಷ್ಟಾಚಾರ ತಡೆಗಟ್ಟುವಲ್ಲಿ ಜಾಗೃತಿ ಮೂಡಿಸುವ ಮೂಲಕ ಜನರಿಗೆ ನ್ಯಾಯ ಒದಗಿಸುವಲ್ಲಿ ಶ್ರಮಿಸಲು ಕರೆ ನೀಡಿದರು. ಪ್ರಮಾಣವಚನ ಸ್ವೀಕರಿಸಲಾಯಿತು. ೩೬ ವರ್ಷ ಅಂಗನವಾಡಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಕೆ. ಬಾಡಗ ಅಂಗನವಾಡಿ ಕಾರ್ಯಕರ್ತೆ ರಾಣಿ ಹಾಗೂ ೧೮ ವರ್ಷ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ನಾರಾಯಣ ಪಾಟಿ, ಅಂಗನವಾಡಿ ಕಾರ್ಯಕರ್ತೆ ನೀಲಮ್ಮ ಇವರುಗಳಿಗೆ ಸನ್ಮಾನಿಸಿ ಗೌರವ ಬೀಳ್ಕೊಡುಗೆ ನೆರವೇರಿಸಲಾಯಿತು.