ಕಣಿವೆ, ನ. ೪: ಕುಡಿವ ನೀರಿನ ಟ್ಯಾಂಕಿಗೆ ಪ್ಲಾಸ್ಟಿಕ್‌ನಿಂದ ಸಂರಕ್ಷಣೆ, ಮಲಗುವ ಸೂರಿಗೂ ಹರಕು ಮುರುಕು ಪ್ಲಾಸ್ಟಿಕ್ ಹೊದಿಕೆ, ನಡುರಾತ್ರಿಯಲ್ಲಿ ಮಳೆ ಸುರಿವಾಗ ಜಾಗರಣೆಯೊಂದಿಗೆ ನಡುಕ, ಕಾಡಾನೆಗಳ ಕಾಟದಿಂದಾಗಿ ರಾತ್ರಿ ಶೌಚಕ್ಕೆ ತಡೆ.....
ಇದು ಸೋಮವಾರಪೇಟೆ ತಾಲೂಕಿನ ಗೋಣಿಮರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಣಾವರ ಕಾಡು ಹಾಡಿಯ ಗಿರಿಜನ ವಾಸಿಗಳ ನಿತ್ಯದ ನರಕದ ಜೀವನ. ಈ ಹಾಡಿಯಲ್ಲಿ ೧೧ ಕುಟುಂಬಗಳಿವೆ. ಸರಿ ಸುಮಾರು ೧೧ ಗುಡಿಸಲುಗಳೇ ಇದ್ದು ೬೦ ಮಂದಿ ವಾಸವಿದ್ದಾರೆ.
ಬಹುತೇಕ ಮಂದಿ ಸುತ್ತಲಿನ ಕಾಫಿ ಹಾಗೂ ಶುಂಠಿ ತೋಟಗಳಿಗೆ ಕೂಲಿಗೆ ಹೋಗುತ್ತಾರೆ.
ಹಾಡಿಯ ಏಕೈಕ ಪದವೀಧರ :
ಈ ಹಾಡಿಯಲ್ಲಿ ಅಂಗನವಾಡಿಗೆ ಎರಡು ಮಕ್ಕಳು ಮಾತ್ರ ದಾಖಲಾದರೆ, ಐದು ಮಕ್ಕಳು ಶಾಲೆಗಳಿಗೆ ಹೋಗುತ್ತವೆ. ಮೂರು ಹೆಣ್ಣು ಮಕ್ಕಳು ಶಾಲಾ ಶಿಕ್ಷಣ ಕಲಿಯುತ್ತಿವೆ. ಇನ್ನು ಪಿಯು ಹಾಗೂ ಪದವಿ ಶಿಕ್ಷಣ ಈ ಹಾಡಿಯ ಮಕ್ಕಳಿಗೆ ಮರೀಚಿಕೆ. ಈ ಹಾಡಿಯ ಚಂದ್ರಿ ಎಂಬವರ ಪುತ್ರ ಸಿದ್ದೇಶ್ ಎಂಬ ಯುವಕ ಪದವಿ ಶಿಕ್ಷಣ ಪೂರ್ಣಗೊಳಿಸಿದ್ದಾನೆ. ಆದರೆ ಜೀವನಕ್ಕೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾನೆ.
ಪಿಯು ಹಾಗೂ ಪದವಿ ವ್ಯಾಸಂಗ ಮಾಡಿರುವ ಹಾಡಿಯ ಮಕ್ಕಳಿಗೆ ಸರ್ಕಾರದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ರೀತಿ ನೀತಿಗಳ ಅರಿವೇ ಇಲ್ಲ. ಹೆಸರಿಗಷ್ಟೇ ಗಿರಿಜನ ಕಲ್ಯಾಣ ಇಲಾಖೆ, ೪ಏ ಸಮಾಜ ಕಲ್ಯಾಣ ಇಲಾಖೆಗಳು. ಸಮಾಜದಲ್ಲಿನ ಕಟ್ಟಕಡೆಯ ಸಮುದಾಯದ ಕುಟುಂಬಗಳ ಮಕ್ಕಳಿಗೆ ಸರ್ಕಾರದ ಸೌಲಭ್ಯಗಳು, ಉದ್ಯೋಗಾವಕಾಶಗಳ ಅರಿವು ಮೂಡಿಸಬೇಕಾದ ಪ್ರಾಮಾಣಿಕ ಹಾಗೂ ಮಾನವೀಯತೆ ಇರುವ ಅಧಿಕಾರಿಗಳ ಕೊರತೆ ಎದ್ದು ಕಾಣುತ್ತಿದೆ.
ಪ್ಲಾಸ್ಟಿಕ್ ಟಾರ್ಪಲ್‌ಗಳು ಕೂಡ ಇಲ್ಲ :
ಈ ಅಮಾಯಕರಾಗಿರುವ ಅರಣ್ಯವಾಸಿಗಳು ವಾಸವಿರುವ ಗುಡಿಸಲಿಗೆ ಹೊದಿಸಲು ಇಲಾಖೆ ಅಥವಾ ಜಿಲ್ಲಾಡಳಿತ ಕೊನೆಯ ಪಕ್ಷ ಪ್ಲಾಸ್ಟಿಕ್ ಟಾರ್ಪಲ್ ಅನ್ನಾದರೂ ಖರೀದಿಸಿ ಉಚಿತವಾಗಿ ಕೊಡುತ್ತಿಲ್ಲ.
ಹಾಗಾಗಿ ಮಳೆ ಹಾಗೂ ಬಿಸಿಲಿನಿಂದ ರಕ್ಷಣೆ ಪಡೆಯಲು ಇಲ್ಲಿನ ಮಂದಿ ತಾವು ದುಡಿದು ಕೂಡಿಟ್ಟ ಅಲ್ಪಸ್ವಲ್ಪ ಹಣವನ್ನು ಕೊಟ್ಟು ಪ್ಲಾಸ್ಟಿಕ್ ಹೊದಿಕೆಗಳನ್ನು ತಂದು ತಮ್ಮ ಗುಡಿಸಲಿಗೆ ಹಾಕಿಕೊಂಡಿದ್ದಾರೆ.
ಈ ಮಧ್ಯೆ ಜೋರು ಗಾಳಿ ಹಾಗೂ ಮಳೆ ಸುರಿದಾಗ ಈ ಮಂದಿಯು ಅಳವಡಿಸಿದ ಪ್ಲಾಸ್ಟಿಕ್ ಹೊದಿಕೆಗಳು ಗಾಳಿ ಮಳೆಯಿಂದಾಗಿ ಹಾರಿ ಹೋದ ಬಗ್ಗೆ ನೊಂದು ಹೇಳುವ ಹಾಡಿಯ ವಾಸಿ ಚಂದ್ರಿ, ರುಕ್ಮಿಣಿ, ಸೀತು ಮೊದಲಾದವರು, ಪೇಟೆ ಪಟ್ಟಣ ನಗರಗಳಲ್ಲಿ ಉಳ್ಳವರಿಗೆ ಸಹಾಯ ಮಾಡುವ ದಾನಿಗಳು ಅಥವಾ ಸಂಘ ಸಂಸ್ಥೆಗಳು ನಮ್ಮಂತಹ ಬಡಪಾಯಿಗಳ ಬಳಿ ಬಂದು ನಾವು ಎದುರಿಸುವ ಸಮಸ್ಯೆಗಳನ್ನು ಕಣ್ಣಾರೆ ಕಂಡು ನಮಗೂ ಏನಾದರೂ ಸಹಾಯ ಹಸ್ತ ಚಾಚಬಹುದಲ್ಲವಾ ಎನ್ನುತ್ತಾರೆ.
ಕಾಡಿನ ಗೂಡೆ ಶೌಚಾಲಯ :
ಶೌಚಾಲಯವಿಲ್ಲದೇ ಪರಿತಪಿಸುವ ಈ ಮಂದಿ, ಅದರಲ್ಲೂ ಹೆಣ್ಣುಮಕ್ಕಳು ಹಾಗೂ ಮಹಿಳೆಯರು ರಾತ್ರಿ ವೇಳೆ ಕಾಡಾನೆಗಳ ಭಯದಿಂದ ರಾತ್ರಿಯಿಡೀ ಬಹಿರ್ದೆಸೆಗೆ ತೆರಳದೇ ಹಗಲಾಗುವುದನ್ನೇ ಕಾಯಬೇಕಾದ ನರಕದ ಜೀವನ ಈ ಮಂದಿಯದು.
ಕರೆಂಟು ಇಲ್ಲ - ಸೋಲಾರ್ ಮೊದಲೇ ಇಲ್ಲ :
ಈ ಹಾಡಿಯಲ್ಲಿ ವಾಸವಿರುವ ಆದಿವಾಸಿಗಳಿಗೆ ಇದುವರೆಗೂ ವಿದ್ಯುತ್ ಬೆಳಕಿನ ಭಾಗ್ಯವೇ ದೊರಕಿಲ್ಲ.
ಹಗಲು ಸೂರ್ಯನ ಬೆಳಕಿನಾಸರೆಯಲ್ಲಿ ದಿನಗಳೆವ ಈ ಮಂದಿ ರಾತ್ರಿ ಚಂದಿರನ ಬೆಳಕಲ್ಲಿ ಜೀವಿಸುತ್ತಿದ್ದಾರೆ.
ಗಿರಿಜನ ಇಲಾಖೆ ಅಥವಾ ಜಿಲ್ಲಾಡಳಿತ ಈ ಮಂದಿಗೆ ಸೋಲಾರ್ ಬೆಳಕಿನ ಭಾಗ್ಯವಾದರೂ ನೀಡಬಹುದು. ಆದರೆ ಅದೂ ಕೂಡ ಇದೂವರೆಗೂ ಸಾಧ್ಯವಾಗಿಲ್ಲ.
ಇನ್ನೂ, ಮನೆಯಲ್ಲಿ ಶೌಚಾಲಯ ಇರದಿದ್ದರೂ ಕೂಡ ಇಲ್ಲಿನ ಪ್ರತೀ ಮಂದಿಯ ಬಳಿ ಮೊಬೈಲ್ ಗಳು ಇವೆ.
ಕೂಲಿ ಕೊಡುವ ಮಾಲೀಕರ ಬಳಿ ಮೊಬೈಲ್ ಚಾರ್ಜ್ :
ಈ ಮಂದಿಯ ಗುಡಿಸಲಲ್ಲಿ ವಿದ್ಯುತ್ ಸಂಪರ್ಕ ಇಲ್ಲದ ಕಾರಣ ಇವರು ಬಳಸುವ ಮೊಬೈಲ್ ಗಳನ್ನು ಚಾರ್ಜ್ ಮಾಡಲು ಇವರು ನಿತ್ಯವೂ ಕೂಲಿ ಮಾಡುವ ಮಾಲೀಕರ ಮನೆಗಳನ್ನು ಆಶ್ರಯಿಸುವ ದೌರ್ಭಾಗ್ಯ ಈ ಅಮಾಯಕ ಮಂದಿಯದ್ದು.
ನೀರಿನ ಟ್ಯಾಂಕ್ ಕವಚ ಕಿತ್ತೆಸೆದ ಕಾಡಾನೆ :
ಈ ಹಾಡಿಯ ವಾಸಿಗಳ ಬಳಕೆಗೆ ಬಾಣಾವರ ಶನಿವಾರಸಂತೆ ಹೆದ್ದಾರಿಯ ಅಂಚಿನಲ್ಲಿ ನಿರ್ಮಿಸಿರುವ ಕುಡಿವ ನೀರಿನ ಸಂಗ್ರಹದ ಟ್ಯಾಂಕ್ ಮೇಲಿನ ಕಾಂಕ್ರೀಟ್ ಮುಚ್ಚಳವನ್ನು ಬಾಯಾರಿಕೆಯಿಂದ ಬಳಲಿ ಬಂದ ಕಾಡಾನೆಯೊಂದು ಸೊಂಡಿಲಿನಿAದ ಕಿತ್ತೆಸೆದು ತನ್ನ ರೌದ್ರಾವತಾರ ತಾಳಿದೆ.
ಇನ್ನು ನಲ್ಲಿಗಳನ್ನು ತಿರುಗಿಸುವ ಭರದಲ್ಲಿ ಮುರಿದು ಹಾಕಿದೆ. ಆದರೆ ಇದೂವರೆಗೂ ಸ್ಥಳೀಯ ಗ್ರಾಪಂ ಆಡಳಿತ ಈ ಟ್ಯಾಂಕನ್ನು ಸ್ವಚ್ಛಗೊಳಿಸುವ ಅಥವಾ ಕಾಡಾನೆ ಕಿತ್ತೆಸೆದ ಮುಚ್ಚಳವನ್ನು ಮರಳಿ ಮೇಲಿಡುವ ಕನಿಷ್ಟ ಪ್ರಯತ್ನವನ್ನೇ ಮಾಡಿಲ್ಲ. ಹಾಗಾಗಿ ನೀರು ಸೋರಿಕೆ ತಪ್ಪಿಸಲು ಇಲ್ಲಿನ ಮಂದಿ ನೀರು ಸೋರುತ್ತಿದ್ದ ಟ್ಯಾಂಕಿನ ನಲ್ಲಿಗೆ ಪ್ಲಾಸ್ಟಿಕ್‌ಗಳನ್ನು ಸುತ್ತಿದ್ದಾರೆ. ಒಟ್ಟಾರೆ ಕೊಡಗು ಜಿಲ್ಲಾಡಳಿತ ಅರಣ್ಯದಲ್ಲಿ ವಾಸವಿರುವ ಆದಿವಾಸಿಗಳನ್ನು ಮನುಷ್ಯರಂತೆ ನೋಡಬೇಕಿದ್ದು, ಸರ್ಕಾರದಿಂದ ದೊರಕುವ ಎಲ್ಲಾ ಸೌಲಭ್ಯಗಳನ್ನು ಚಾಚುತಪ್ಪದೇ ಇನ್ನಾದರೂ ಒದಗಿಸಬೇಕಿದೆ.
-ಕೆ.ಎಸ್. ಮೂರ್ತಿ