x
ಮನೆಯೊಳಗೆ ಮೈ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡ ಆರೋಪಿ!
ಸೋಮವಾರಪೇಟೆ, ನ. ೪: ವಿವಿಧ ಕಳ್ಳತನ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಗೆ ನ್ಯಾಯಾಲಯದಿಂದ ಬಂದ ಅರೆಸ್ಟ್ ವಾರೆಂಟ್ ನೀಡಿ ವಶಕ್ಕೆ ಪಡೆಯಲು ಪೊಲೀಸರು ಮುಂದಾದ ಸಂದರ್ಭ, ಮನೆಯೊಳಗಿದ್ದ ಪೆಟ್ರೋಲ್‌ನ್ನು ತನ್ನ ಮೈಮೇಲೆ ಸುರಿದುಕೊಂಡು, ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಂದು ಬೆಳಿಗ್ಗೆ ಪಟ್ಟಣದ ಗಾಂಧಿನಗರದಲ್ಲಿ ನಡೆದಿದೆ.
ಗಾಂಧಿನಗರದ ನಿವಾಸಿ ಸಂಜಯ್ ಎಂಬಾತ ಹಲವಾರು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಪೊಲೀಸರು ಆರೋಪಪಟ್ಟಿ ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಕೆಲವೊಂದು ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ತಪ್ಪಿಸಿಕೊಂಡಿದ್ದ ಸಂಜಯ್‌ಗೆ, ನ್ಯಾಯಾಲಯ ಅರೆಸ್ಟ್ ವಾರೆಂಟ್ ಹೊರಡಿಸಿತ್ತು. ಈ ಅರೆಸ್ಟ್ ವಾರೆಂಟ್ ನೀಡಿ ವಶಕ್ಕೆ ಪಡೆಯಲೆಂದು ಇಂದು ಬೆಳಿಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಮಲ್ಲೇಶ್ ಹಾಗೂ ಸಾಜನ್ ಅವರುಗಳು ಆರೋಪಿಯ ಮನೆಗೆ ತೆರಳಿದ್ದರು. ವಾರೆಂಟ್‌ನ ವಿಚಾರ ತಿಳಿಸಿದ ಮೇರೆ, ಬಟ್ಟೆ ಬದಲಾಯಿಸಿಕೊಂಡು ಬರುವು ದಾಗಿ ಮನೆಯೊಳಗೆ ತೆರಳಿದ ಆರೋಪಿ ಸಂಜಯ್, ಏಕಾಏಕಿ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು, ಬೆಂಕಿ ಹಚ್ಚಿಕೊಂಡಿದ್ದಾನೆ. ಉರಿ ತಾಳಲಾರದೇ ಕಿರುಚಿಕೊಂಡ ಸಂದರ್ಭ ಪೊಲೀಸ್ ಸಿಬ್ಬಂದಿಗಳೂ ಸಹ ಮನೆಯೊಳಗೆ ದೌಡಾಯಿಸಿದ್ದಾರೆ.
ಬೆಂಕಿ ಹೊತ್ತಿ ಉರಿಯುತ್ತಿದ್ದ ಹಿನ್ನೆಲೆ, ಸಂಜಯ್‌ನ ಟೀಶರ್ಟ್ನ್ನು ಬಿಚ್ಚಿ, ನೀರು ಹಾಕಿದ್ದಾರೆ. ಈ ಗಡಿಬಿಡಿಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಮಲ್ಲೇಶ್ ಹಾಗೂ ಸಾಜನ್ ಅವರುಗಳ ಕೈಗಳಿಗೂ ಬೆಂಕಿ ತಗುಲಿದ್ದು, ಸುಟ್ಟಗಾಯಗಳಾಗಿವೆ. ಸಂಜಯ್‌ನ ಸೊಂಟದಿAದ ಮೇಲ್ಭಾಗಕ್ಕೆ ತೀವ್ರ ಸುಟ್ಟಗಾಯಗಳಾಗಿದ್ದು, ಗಂಭೀರ ಸ್ಥಿತಿಗೆ ತಲುಪಿದ್ದಾನೆ.
ತಕ್ಷಣ ಗಾಯಾಳು ಸಂಜಯ್‌ನನ್ನು ಪೊಲೀಸರು ಸ್ಥಳೀಯರ ಸಹಕಾರದಿಂದ ಸೋಮವಾರಪೇಟೆ ಆಸ್ಪತ್ರೆಗೆ ಸಾಗಿಸಿದ್ದಾರೆ. ನಂತರ ಗಾಯಾಳು ಪೊಲೀಸರು ಆಸ್ಪತ್ರೆಗೆ ಆಗಮಿಸಿ ಪ್ರಥಮ ಚಿಕಿತ್ಸೆ ಪಡೆದಿದ್ದಾರೆ. ನಂತರ ಮೂವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಕೆ.ಆರ್. ಆಸ್ಪತ್ರೆಗೆ ಸಾಗಿಸಲಾಗಿದೆ.