ಶ್ರೀಕಾಕುಳಂ, ನ. ೧: ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಕಾಸಿಬುಗ್ಗ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಇಂದು ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಟ ಹತ್ತು ಭಕ್ತರು ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ. ಏಕಾದಶಿ ಶುಭ ದಿನದಂದು ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ದೊಡ್ಡ ಸಂಖ್ಯೆಯ ಜನ ಸೇರಿದ್ದರು. ಬೆಳಿಗ್ಗೆ ೧೧.೩೦ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಒಟ್ಟು ೧೦ ಸಾವು. ಏಳು ಸ್ಥಳದಲ್ಲೇ ಮತ್ತು ಮೂರು ಚಿಕಿತ್ಸೆ ಪಡೆಯುವಾಗ ಸಂಭವಿಸಿವೆ ಎಂದು ಶ್ರೀಕಾಕುಳಂ ಜಿಲ್ಲಾಧಿಕಾರಿ ಸ್ವಪ್ನಿಲ್ ದಿನಕರ್ ಪುಂಡ್ಕರ್ ತಿಳಿಸಿದ್ದಾರೆ. ಹೆಚ್ಚಿನ ಬಲಿಪಶುಗಳು ಮಹಿಳೆಯರು ಎಂದು ಅವರು ಹೇಳಿದ್ದಾರೆ. ದೇವಾಲಯವು ಮೊದಲ ಮಹಡಿಯಲ್ಲಿ ಎತ್ತರದಲ್ಲಿದೆ ಮತ್ತು ಭಕ್ತರು ಹತ್ತುವಾಗ, ಕೈಗಂಬಿ ಮುರಿದುಹೋಗಿ, ಮೂಲೆಯಲ್ಲಿ ನಿಂತಿದ್ದ ಜನರು ಕೆಳಗೆ ಬಿದ್ದಿದ್ದಾರೆ. ಇತರರು ಅವರ ಮೇಲೆ ಬಿದ್ದಿದ್ದಾರೆ. ಕಾಸಿಬುಗ್ಗ ವೆಂಕಟೇಶ್ವರ ದೇವಾಲಯವು ಖಾಸಗಿ ದೇವಾಲಯವಾಗಿದ್ದು, ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿಲ್ಲ. ಪ್ರತಿ ಶನಿವಾರ ೧,೫೦೦ ರಿಂದ ೨,೦೦೦ ಭಕ್ತರು ಇಲ್ಲಿಗೆ ಬರುವುದು ಸಾಮಾನ್ಯವಾಗಿದೆ. ಇದಲ್ಲದೆ, ಏಕಾದಶಿಯು ‘ಕಾರ್ತಿಕ ಮಾಸ’ದೊಂದಿಗೆ ಶನಿವಾರದಂದು ಬಂದುದರಿAದ ದುರಂತವು ಇನ್ನಷ್ಟು ಹೆಚ್ಚಾಯಿತು, ಏಕೆಂದರೆ ಅಸಂಖ್ಯಾತ ಭಕ್ತರು ದೇವಾಲಯಕ್ಕೆ ಧಾವಿಸಿದ್ದರು.