ಮಡಿಕೇರಿ, ನ. ೧: ಮಡಿಕೇರಿ ಅಂಚೆ ಕಚೇರಿ, ಕೊಡಗು ವಿಭಾಗದ ವತಿಯಿಂದ ವಿಚಕ್ಷಣ ಜಾಗೃತಿ ಸಪ್ತಾಹ ೨೦೨೫ ರ ಅಂಗವಾಗಿ ಇತ್ತೀಚೆಗೆ ಮಡಿಕೇರಿ ಅಂಚೆ ಕಚೇರಿಯಲ್ಲಿ ವಿದ್ಯಾರ್ಥಿಗಳಿಗಾಗಿ ಆಶುಭಾಷಣ ಸ್ಪರ್ಧೆ ಆಯೋಜಿಸಲಾಯಿತು. ‘ಜಾಗೃತಿ - ನಮ್ಮ ಜವಾಬ್ದಾರಿಯುತ ಪಾಲುದಾರಿಕೆ’ ಎಂಬ ವಿಷಯದ ಮೇಲೆ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಆಶುಭಾಷಣ ಸ್ಪರ್ಧೆಯಲ್ಲಿ ಜನರಲ್ ತಿಮ್ಮಯ್ಯ ಶಾಲೆಯ ಹೆಚ್.ಪಿ. ಸಾನ್ವಿ ಮೊದಲ ಬಹುಮಾನ, ಪಿ. ಲಕ್ಷಾ ದಿನೇಶ್ ದ್ವಿತೀಯ ಮತ್ತು ಸೆಂಟ್ ಜೋಸೆಫ್ ಕಾನ್ವೆಂಟ್ ಹೈಸ್ಕೂಲ್ ವಿದ್ಯಾರ್ಥಿನಿ ಅರ್ಪಿತಾ ತೃತೀಯ ಬಹುಮಾನವನ್ನು ಪಡೆದರು. ಕಾಲೇಜು ವಿಭಾಗದ ವಿದ್ಯಾರ್ಥಿಗಳಿಗಾಗಿ ನಡೆದ ಸ್ಪರ್ಧೆಯಲ್ಲಿ ಮಡಿಕೇರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಹೆಚ್.ಕೆ. ಜೀವನ ಮೊದಲ ಬಹುಮಾನ, ಸೆಂಟ್ ಜೋಸೆಫ್ ಕಾನ್ವೆಂಟ್ ಶಾಲೆಯ ಸಂಜನಾ ಮೂರ್ತಿ ದ್ವಿತೀಯ ಬಹುಮಾನ ಹಾಗೂ ಜೂನಿಯರ್ ಕಾಲೇಜಿನ ದಾರಿಕ್ ತೃತೀಯ ಬಹುಮಾನಗಳನ್ನು ಗಳಿಸಿದರು.ಸ್ಪರ್ಧೆಗೆ ಸಹಕಾರ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಶ್ಯಾಮಲಾ ತೀರ್ಪುಗಾರರಾಗಿದ್ದರು. ಕೊಡಗು ಅಂಚೆ ಅಧೀಕ್ಷದ ಎಸ್.ಪಿ. ರವಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಅಂಚೆ ಇಲಾಖೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.