ಸೋಮವಾರಪೇಟೆ, ಅ. ೩೧: ಹಲವಾರು ದಶಕಗಳಿಂದ ರೈತರು ಬದುಕು ಕಟ್ಟಿಕೊಂಡಿರುವ ಜಾಗವನ್ನು ಸರ್ಕಾರ ಹಾಗೂ ಅರಣ್ಯ ಇಲಾಖೆ ಏಕಾಏಕಿ ಅರಣ್ಯವೆಂದು ಘೋಷಿಸಿ, ರೈತರನ್ನು ಬೀದಿಪಾಲು ಮಾಡಲು ಹೊರಟಿದೆ ಎಂದು ಆರೋಪಿಸಿರುವ ರೈತ ಹೋರಾಟ ಸಮಿತಿ, ಈ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ನ. ೩ರಂದು ಸೋಮವಾರಪೇಟೆಯಲ್ಲಿ ಬೃಹತ್ ರೈತ ಜಾಗೃತಿ ಸಮಾವೇಶ ಆಯೋಜಿಸಿದೆ ಎಂದು ತಿಳಿಸಿದೆ.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೈತ ಹೋರಾಟ ಸಮಿತಿ ಅಧ್ಯಕ್ಷ ಸುರೇಶ್ ಚಕ್ರವರ್ತಿ ಅವರು, ೧೯೭೮ರಲ್ಲಿ ಅವೈಜ್ಞಾನಿಕವಾಗಿ ಅಧಿಕಾರಿಗಳು ಸಲ್ಲಿಸಿದ ವರದಿಯನ್ನು ಈವರೆಗೆ ಆಡಳಿತ ನಡೆಸಿದ ಸರ್ಕಾರಗಳು ಸರಿಪಡಿಸುವ ಗೋಜಿಗೆ ಹೋಗಿಲ್ಲ. ಇದೀಗ ರೈತರ ಕೃಷಿ ಭೂಮಿಯನ್ನು ಅರಣ್ಯ ಎಂದು ಘೋಷಣೆ ಮಾಡಲು ಹುನ್ನಾರ ನಡೆಸುತ್ತಿದ್ದು, ಅರಣ್ಯ ಇಲಾಖೆ ಸರ್ವೆ ಕಾರ್ಯ ನಡೆಸುತ್ತಿದೆ. ಇದನ್ನು ವಿರೋಧಿಸಿ ಜಾಗೃತಿ ಸಮಾವೇಶ ನಡೆಸಲಾಗುತ್ತಿದೆ ಎಂದರು.

ಸಿ ಮತ್ತು ಡಿ, ಸೆಕ್ಷನ್-೪, ಡೀಮ್ಡ್ ಫಾರೆಸ್ಟ್ ಸಮಸ್ಯೆ, ಹಕ್ಕುಪತ್ರ ನೀಡಲು ಅರಣ್ಯ ಇಲಾಖೆಯ ಅಡ್ಡಗಾಲು, ಮುಕ್ಕೋಡ್ಲಿನಲ್ಲಿ ಕೃಷಿ ನಾಶ ಮಾಡಿದ ಅರಣ್ಯ ಇಲಾಖಾ ಸಿಬ್ಬಂದಿಗಳ ವಿರುದ್ಧ ಈವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದೂ ಸೇರಿದಂತೆ ಇನ್ನಿತರ ಸಮಸ್ಯೆಗಳ ಬಗ್ಗೆ ಸಮಾವೇಶದಲ್ಲಿ ಚರ್ಚೆ ನಡೆಸಲಾಗುವುದು ಎಂದು ಸುರೇಶ್ ತಿಳಿಸಿದರು.

ಸಮಿತಿಯ ವತಿಯಿಂದ ಈವರೆಗೆ ಶಾಂತಿಯುತ ಪ್ರತಿಭಟನೆ, ಸೋಮವಾರಪೇಟೆ ತಾಲೂಕು ಬಂದ್ ನಡೆಸಲಾಗಿದೆ. ಶಾಸಕರು, ಸಂಸದರು, ಮುಖ್ಯಮಂತ್ರಿಗಳು, ಅರಣ್ಯ ಹಾಗೂ ಕಂದಾಯ ಇಲಾಖಾ ಸಚಿವರನ್ನೂ ಭೇಟಿ ಮಾಡಿ ಗಮನ ಸೆಳೆದಿದ್ದರೂ ಪ್ರಯೋಜನ ಶೂನ್ಯವಾಗಿದೆ. ಕೊಡಗಿನ ರೈತರ ಮುಗ್ಧತೆಯನ್ನು ಸರ್ಕಾರ ದೌರ್ಬಲ್ಯವೆಂದು ಪರಿಗಣಿಸಿದಂತಿದೆ. ಈ ಹಿನ್ನೆಲೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದರು.

ಅರಣ್ಯ ಇಲಾಖೆ, ಸರ್ಕಾರದ ಕೆಲವೊಂದು ನಿಯಮಗಳಿಂದಾಗಿ ಕೃಷಿ ಫಸಲು ನಷ್ಟ ಪರಿಹಾರ ಪಡೆಯಲು ಸಾಧ್ಯವಾಗುತ್ತಿಲ್ಲ. ಮನೆಗಳು ಬಿದ್ದುಹೋದರೆ ಪರಿಹಾರ ಲಭಿಸುತ್ತಿಲ್ಲ. ಹಲವಾರು ದಶಕಗಳಿಂದ ವಾಸವಿರುವ, ಕೃಷಿ ಮಾಡಿಕೊಂಡಿರುವ ಜಾಗಕ್ಕೆ ದಾಖಲೆಗಳನ್ನೂ ನೀಡುತ್ತಿಲ್ಲ. ಫಾರಂ ೫೦,೫೩,೫೭ ಅಡಿಯಲ್ಲಿ ಅರ್ಜಿ ಸಲ್ಲಿಸಿ ಕಚೇರಿಗೆ ಅಲೆದು ರೈತರ ಚಪ್ಪಲಿ ಸವೆದಿದೆಯೇ ಹೊರತು ದಾಖಲೆ ಕೈಸೇರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವೀರಾಜಪೇಟೆಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರು ಜಮ್ಮಾ ಬಾಣೆ ಸಮಸ್ಯೆ ನಿವಾರಣೆಗೆ ತೆಗೆದುಕೊಳ್ಳುವ ಕ್ರಮ ಸ್ವಾಗತಾರ್ಹ. ಇದರೊಂದಿಗೆ ಸಿ ಮತ್ತು ಡಿ, ಸೆಕ್ಷನ್-೪ ಬಗ್ಗೆಯೂ ಗಮನ ಹರಿಸಬೇಕು. ವೀರಾಜಪೇಟೆ ಕ್ಷೇತ್ರದಲ್ಲೂ ೧೦ ಸಾವಿರಕ್ಕೂ ಅಧಿಕ ಎಕರೆ ಜಾಗವು ಸಿ ಮತ್ತು ಡಿ ಎಂದು ನಮೂದಾಗಿದೆ. ಈ ಬಗ್ಗೆಯೂ ಮುಖ್ಯಮಂತ್ರಿಗಳ ಗಮನ ಸೆಳೆಯಬೇಕೆಂದರು.

ವಿಧಾನ ಸಭಾ ಅಧಿವೇಶನದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ಸಮಸ್ಯೆಯ ಗಂಭೀರತೆಯನ್ನು ತಿಳಿಸುವ ಸಂದರ್ಭ ಅವಕಾಶ ನೀಡದೆ ಸ್ಪೀಕರ್ ಯು.ಟಿ. ಖಾದರ್ ಅವರು ಮಲತಾಯಿ ಧೋರಣೆ ಅನುಸರಿಸಿದ್ದಾರೆ. ಇದನ್ನು ಖಂಡಿಸುವುದಾಗಿ ಹೇಳಿದ ಸುರೇಶ್ ಚಕ್ರವರ್ತಿ, ರೈತರನ್ನು ಒಕ್ಕಲೆಬ್ಬಿಸಲು ಸರ್ಕಾರ ಮುಂದಾದರೆ ಈ ಭಾಗದಲ್ಲೂ ನಕ್ಸಲಿಸಂ ಹುಟ್ಟಿಗೆ ಕಾರಣವಾಗಬಹುದು. ಇಂತಹ ಸನ್ನಿವೇಶಗಳಿಗೆ ಸರ್ಕಾರ ಅವಕಾಶ ಕೊಡಬಾರದು ಎಂದರು.

ಜAಟಿ ಸರ್ವೆ ಮಾಡುವುದಾಗಿ ಹೇಳಿದ್ದ ಜಿಲ್ಲಾಧಿಕಾರಿಗಳು ಈವರೆಗೆ ಆ ಬಗ್ಗೆ ಕ್ರಮ ಕೈಗೊಂಡಿಲ್ಲ. ಜನರು ಸರ್ಕಾರದ ವಿರುದ್ಧ ತಿರುಗಿ ಬೀಳುವ ಮುನ್ನ ಎಚ್ಚೆತ್ತುಕೊಳ್ಳಬೇಕು ಎಂದರು. ತಾ. ೩ ರಂದು ಬೆಳಿಗ್ಗೆ ೧೦ ಗಂಟೆಗೆ ಸೋಮವಾರಪೇಟೆ ಪಟ್ಟಣದ ವಿವೇಕಾನಂದ ವೃತ್ತದಿಂದ ಮೆರವಣಿಗೆ ತೆರಳಿ ೧೧ ಗಂಟೆಗೆ ಜೇಸೀ ವೇದಿಕೆಯಲ್ಲಿ ಬಹಿರಂಗ ಜಾಗೃತಿ ಸಮಾವೇಶ ನಡೆಸಲಾಗುವುದು. ಸಮಾವೇಶಕ್ಕೆ ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿಗಳಾದ ಚುಕ್ಕಿ ನಂಜುAಡಸ್ವಾಮಿ, ಹೊನ್ನೂರು ಪ್ರಕಾಶ್, ಮಂಜು ಕಿರಣ್, ಮನು ಸೋಮಯ್ಯ, ಅರಕಲಗೂಡು ಯೋಗಣ್ಣ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದರು.

ಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಜಿ.ಎಂ. ಹೂವಯ್ಯ, ತಾಲೂಕು ಅಧ್ಯಕ್ಷ ಕೆ.ಎಂ. ದಿನೇಶ್, ಹೋರಾಟ ಸಮಿತಿಯ ಪ್ರಮುಖರಾದ ಬಿ.ಪಿ. ಮೊಗಪ್ಪ, ನಾಗರಾಜು ಅವರುಗಳು ಇದ್ದರು.