ಸೋಮವಾರಪೇಟೆ, ಅ. ೨೯: ಕಾವ್ಯ ಜನರ ಹೃದಯವನ್ನು ತಟ್ಟಿದರೆ ಕವಿಗಳು ಬರೆದ ಕಾವ್ಯ ಸಾರ್ಥಕವಾಗುತ್ತದೆ ಎಂದು ಸಾಹಿತಿ ಮತ್ತು ಜಾನಪದ ವಿದ್ವಾಂಸರಾದ ಡಾ. ಬೆಸೂರು ಮೋಹನ್ ಪಾಳೇಗಾರ್ ಅಭಿಪ್ರಾಯಿಸಿದರು. ಕನ್ನಡ ಸಾಹಿತ್ಯ ಪರಿಷತ್ ಸೋಮವಾರಪೇಟೆ ತಾಲೂಕು, ಮಹಿಳಾ ಸಹಕಾರ ಸಂಘ, ಅಕ್ಷಯ ಮಹಿಳಾ ಪತ್ತಿನ ಸಹಕಾರ ಸಂಘ, ಅಕ್ಕನ ಬಳಗ ಆಶ್ರಯದಲ್ಲಿ ಮಹಿಳಾ ಸಮಾಜದಲ್ಲಿ ಭಾನುವಾರ ನಡೆದ ಹಿರಿಯ ಸಾಹಿತಿ ಜಲಜಾ ಶೇಖರ್ ಅವರು ಬರೆದಿರುವ “ಕನ್ನಡಿಯ ಪ್ರತಿಬಿಂಬ” ಕವನ ಸಂಕಲನ ಮತ್ತು “ದೂರದ ತೀರ ಯಾನ” ಪ್ರವಾಸ ಕಥನ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಕೃತಿ ಮತ್ತು ಕಾವ್ಯವನ್ನು ವಿಮರ್ಶೆಯ ಹೆಸರಿನಲ್ಲಿ ವಿಪರೀತ ಟೀಕೆ ಮಾಡಿದರೆ, ಒಬ್ಬ ಸಾಹಿತಿ ಮತ್ತು ಕವಿ, ಸಾಹಿತ್ಯ ಕೃಷಿಯನ್ನೇ ತ್ಯಜಿಸುವ ಸಂಭವವಿರುತ್ತದೆ. ಪ್ರತಿಯೊಬ್ಬರು ಅವರ ಭಾಷಾ ಜ್ಞಾನಕ್ಕೆ ಅನುಗುಣವಾಗಿ ಬರೆದಿರುತ್ತಾರೆ. ಅದು ಸಾಮಾನ್ಯ ಓದುಗನಿಗೆ ಅರ್ಥವಾದರೆ ಸಾಕು ಎಂದು ಅಭಿಪ್ರಾಯಿಸಿದರು.

ಲೇಖಕನಿಗೆ ಇಡೀ ಸಮಾಜವನ್ನು ಮೆಚ್ಚಿಸಲು ಸಾಧ್ಯವಿಲ್ಲ. ಕನ್ನಡ ಭಾಷೆಯ ಕಾವ್ಯ ಮತ್ತು ಸಾಹಿತ್ಯವನ್ನು ಬೇರೆ ಭಾಷೆಗಳಿಗೆ ತರ್ಜುಮೆ ಮಾಡಲು ಬಹಳಷ್ಟು ಕಷ್ಟವಾಗುತ್ತದೆ. ಕಾವ್ಯ ಸೃಷ್ಟಿಗೆ ಸಾವಿಲ್ಲ. ಓದುಗರು ಇಲ್ಲದಿದ್ದರೂ ಸಾಹಿತಿಗಳು ಬರೆಯುವುದನ್ನು ನಿಲ್ಲಿಸುವುದಿಲ್ಲ. ಇದು ಕನ್ನಡ ಸಾಹಿತ್ಯದ ಶಕ್ತಿ ಎಂದು ಅಭಿಪ್ರಾಯಿಸಿದರು. ಕಾರ್ಯಕ್ರಮ ಉದ್ಘಾಟಿಸಿದ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಕನ್ನಡ ಭಾಷಾ ಬೆಳವಣಿಗೆಯಲ್ಲಿ ಶಿಕ್ಷಕರಾಗಿ, ಸಾಹಿತಿಯಾಗಿ ಜಲಜಾ ಶೇಖರ್ ಅವರು ತಮ್ಮ ಕೊಡುಗೆ ನೀಡಿದ್ದಾರೆ. ಈಗಾಗಲೇ ಏಳು ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಗೌರವ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರ ಕನ್ನಡ ಸಾಹಿತ್ಯ ಸೇವೆ ಮುಂದುವರಿಯಲಿ ಎಂದು ಹಾರೈಸಿದರು.

ವೇದಿಕೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಡಿ. ವಿಜೇತ್, ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಎಸ್.ಎ. ಮುರುಳೀದರ್, ಅಕ್ಷಯ ಪತ್ತಿನ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಬೇಬಿ ಚಂದ್ರಹಾಸ್, ಅಕ್ಕನ ಬಳಗ ಅಧ್ಯಕ್ಷೆ ಗೀತಾ ರಾಜು, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಜೆ.ಸಿ.ಶೇಖರ್, ಎಚ್.ಜೆ. ಜವರಪ್ಪ, ಕೃತಿಗಳ ಲೇಖಕಿ ಜಲಜಾ ಶೇಖರ್, ಮಹಿಳಾ ಸಹಕಾರ ಸಂಘದ ಕಾರ್ಯದರ್ಶಿ ಆಶಾ ಶುಭಾಕರ್, ಕಸಾಪ ಗೌರವ ಕಾರ್ಯದರ್ಶಿಗಳಾದ ಜ್ಯೋತಿ ಅರುಣ್, ಎ.ಪಿ. ವೀರರಾಜು ಇದ್ದರು.