ಸಿದ್ದಾಪುರ, ಅ. ೨೯ : ತಣಲ್ ಸಂಸ್ಥೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವುದು ನಿಜವಾಗಿಯೂ ಶ್ಲಾಘನೀಯ ಕಾರ್ಯ ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಪ್ರಶಂಸೆ ವ್ಯಕ್ತಪಡಿಸಿದರು.

ಸಿದ್ದಾಪುರದಲ್ಲಿ ತಣಲ್ ಸಂಸ್ಥೆ ವತಿಯಿಂದ ನಡೆಸುತ್ತಿರುವ ಡಯಾಲಿಸಿಸ್ ಕೇಂದ್ರಕ್ಕೆ ಆರ್ಥಿಕ ನೆರವಿಗಾಗಿ `ಬಿರಿಯಾನಿ ಚಾಲೆಂಜ್’ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು, ಎಲ್ಲರಿಗೂ ಡಯಾಲಿಸಿಸ್ ಚಿಕಿತ್ಸೆಗೆ ಒಳಗಾಗುವುದು ಅಸಾಧ್ಯವಾಗಿದೆ. ಈ ನಡುವೆ ಬಡವರಿಗಾಗಿ ತಣಲ್ ಸಂಸ್ಥೆಯು ಕಡಿಮೆ ವೆಚ್ಚದಲ್ಲಿ ಹಾಗೂ ಇನ್ನು ಕೆಲವರಿಗೆ ಉಚಿತವಾಗಿ ಸೇವೆ ಒದಗಿಸಲು ಮುಂದಾಗಿರುವುದು ಉತ್ತಮ ಕಾರ್ಯವಾಗಿದೆ. ಬಿರಿಯಾನಿ ಚಾಲೆಂಜ್ ಮೂಲಕ ಬರುವ ಹಣದಿಂದ ಬಡ ರೋಗಿಗಳಿಗೆ ಚಿಕಿತ್ಸೆಗೆ ನೆರವಾಗುತ್ತಿರುವ ಮೂಲಕ ಸಂಘಟನೆಯು ನಿಜವಾದ ಸೇವೆಯನ್ನು ನೀಡುತ್ತಿದೆ ಎಂದು ಶ್ಲಾಘಸಿದರು. ತಣಲ್ ಸಂಸ್ಥೆಗೆ ಮುಂದಿನ ದಿನಗಳಲ್ಲಿ ತಾನು ಸಹಕಾರ ನೀಡುವುದಾಗಿ ಪೊನ್ನಣ್ಣ ಭರವಸೆಯನ್ನು ನೀಡಿದರು.

ತಣಲ್ ಸಂಸ್ಥೆಯ ಪ್ರಮುಖರಾದ ಬಶೀರ್ ಮಾತನಾಡಿ, ಡಯಾಲಿಸಿಸ್ ಕೇಂದ್ರಕ್ಕೆ ಅಧಿಕ ಸಂಖ್ಯೆಯಲ್ಲಿ ರೋಗಿಗಳು ಬರುತ್ತಿದ್ದು, ಇವರ ಖರ್ಚು ವೆಚ್ಚಗಳನ್ನು ಭರಿಸುವ ಉದ್ದೇಶದಿಂದ ಬಿರಿಯಾನಿ ಚಾಲೆಂಜ್ ಎಂಬ ಹೆಸರಿನಲ್ಲಿ ಬಿರಿಯಾನಿಯನ್ನು ಮಾರಾಟ ಮಾಡಿ ಅದರ ಲಾಭವನ್ನು ಕಿಡ್ನಿ ತೊಂದರೆ ಇರುವ ರೋಗಿಗಳ ಚಿಕಿತ್ಸೆಗೆ ಬಳಸಲಾಗುತ್ತಿದೆ. ಈ ಬಾರಿ ಸುಮಾರು ೧೨,೦೦೦ ಬಿರಿಯಾನಿ ಪೊಟ್ಟಣಗಳನ್ನು ಹಂಚಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಎಸ್. ವೆಂಕಟೇಶ್. ಜಿಲ್ಲಾ ಎಸ್.ಎನ್.ಡಿ.ಪಿ. ಯೂನಿಯನ್ ಜಿಲ್ಲಾಧ್ಯಕ್ಷ ವಿ.ಕೆ. ಲೋಕೇಶ್, ಸಿದ್ದಾಪುರ ಸಂತ ಜೋಸೆಫ್ ಚರ್ಚ್ನ ಧರ್ಮ ಗುರುಗಳಾದ ಫಾ. ಮೈಕಲ್‌ಮರಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪಳನಿ ಸ್ವಾಮಿ, ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರತಿಶ್, ಸಿದ್ದಾಪುರ ಹಾಗೂ ನೆಲ್ಲಿಹುದಿಕೇರಿ ಗ್ರಾಮದ ಮಸೀದಿಗಳ ಧರ್ಮಗುರುಗಳು. ಗ್ರಾಮ ಪಂಚಾಯಿತಿ ಸದಸ್ಯರುಗಳು ಮತ್ತು ತಣಲ್ ಸಂಸ್ಥೆಯ ಪದಾಧಿಕಾರಿಗಳು ಹಾಜರಿದ್ದರು.