ಭಾಗಮAಡಲ, ಅ. ೨೯ : ಭಾಗಮಂಡಲದ ಭಗಂಡೇಶ್ವರ ಹಾಗೂ ತಲಕಾವೇರಿ ದೇವಾಲಯದ ಹುಂಡಿ ಎಣಿಕೆ ಇಂದು ಭಗಂಡೇಶ್ವರ ದೇವಾಲಯದಲ್ಲಿ ನಡೆಯಿತು. ಬೆಳಿಗ್ಗೆ ೮ ಗಂಟೆಯಿAದ ಆರಂಭಿಸಿ ಸಂಜೆ ೫.೩೦ರ ವರೆಗೆ ನಿರಂತರವಾಗಿ ೨೫ ಮಂದಿ ಹುಂಡಿ ಹಣ ಎಣಿಕೆ ಕಾರ್ಯ ಕೈಗೊಂಡರು. ತಾ. ೧೭ ರಂದು ಜರುಗಿದ ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಜಾತ್ರೆಯ ನಂತರ ಪ್ರಥಮ ಹುಂಡಿ ಎಣಿಕೆಯನ್ನು ಭಾಗಮಂಡಲ ಕೆನರಾ ಬ್ಯಾಂಕ್ ಸಿಬ್ಬಂದಿ, ಭಾಗಮಂಡಲ ಆರಕ್ಷಕ ಠಾಣಾ ಸಿಬ್ಬಂದಿಯವರು, ದೇವಾಲಯದ ಕಾರ್ಯನಿರ್ವಾಹಣಾಧಿಕಾರಿಗಳು, ತಕ್ಕಮುಖ್ಯಸ್ಥರು ಮತ್ತು ಸಿಬ್ಬಂದಿಯವರು ಮತ್ತು ಸ್ವಯಂ ಸೇವಕರು ಹಾಗೂ ಭಾಗಮಂಡಲ ಕಂದಾಯ ಇಲಾಖೆ ಸಿಬ್ಬಂದಿ ಸಮಕ್ಷಮ ವೀಡಿಯೋ ಚಿತ್ರೀಕರಣದೊಂದಿಗೆ ಹುಂಡಿ ಎಣಿಕೆಯನ್ನು ನಡೆಸಲಾಯಿತು. ಈ ವರ್ಷ ರೂ. ಹದಿನೆಂಟು ಲಕ್ಷದ ಐದು ಸಾವಿರ ಮೊತ್ತ ಸಂಗ್ರಹವಾಗಿದೆ.

ಶ್ರೀ ತಲಕಾವೇರಿ ದೇವಾಲಯದಲ್ಲಿ ರೂ. ೭,೨೭,೩೮೯, ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ರೂ. ೫,೪೪,೩೩೩, ಅನ್ನ ಸಂತರ್ಪಣಾ ನಿಧಿ ಯಲ್ಲಿ ರೂ. ೨,೫೨,೮೬೭ ಹಾಗೂ ಇ-ಹುಂಡಿಯಲ್ಲಿ ರೂ. ೨,೮೦,೪೧೧ ಸಂಗ್ರಹವಾಗಿದ್ದು ಒಟ್ಟು ಸಂಗ್ರಹ ರೂ. ೧೮.೫ ಲಕ್ಷವಾಗಿದೆ.

ಕಳೆದ ವರ್ಷ ರೂ ೧೨, ೦೬, ೮೫೫ ಸಂಗ್ರಹವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ರೂ.೫,೯೮,೧೪೫ ಹೆಚ್ಚಿಗೆ ಸಂಗ್ರಹವಾಗಿದೆ.