ಸಿದ್ದಾಪುರ, ಅ. ೨೯ : ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ದಾಂಧಲೆ ನಡೆಸುತ್ತಿದ್ದ ೨೬ ಕ್ಕೂ ಅಧಿಕ ಕಾಡಾನೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಕಾಡಿಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ತಿತಿಮತಿ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಡಗ ಬಾಣಂಗಾಲ ಗ್ರಾಮದ ಬಾಣಂಗಾಲ ಕಾಫಿ ತೋಟ ಮತ್ತು ಮಾರ್ಗೊಲ್ಲಿ ಭಾಗದ ಕಾಫಿ ತೋಟದೊಳಗೆ ಚೆನ್ನಂಗಿ ಶಾಖೆಯ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ದಾಂಧಲೆ ನಡೆಸಿ ಕೃಷಿ ಫಸಲುಗಳನ್ನು ನಾಶಗೊಳಿಸುತ್ತಿದ್ದ ೩ ಗುಂಪಿನ ೪ ಮರಿಯಾನೆಗಳು ಸೇರಿದಂತೆ ೨೬ಕ್ಕೂ ಅಧಿಕ ಕಾಡಾನೆಗಳನ್ನು ಕಾರ್ಯಾಚರಣೆ ನಡೆಸಿ ಮಾಲ್ದಾರೆ ಮೀಸಲು ಅರಣ್ಯಕ್ಕೆ ಹಾಗೂ ದೇವಮಚ್ಚಿ ಮೀಸಲು ಅರಣ್ಯಕ್ಕೆ ಅಟ್ಟಲಾಗಿದೆ. ಈ ಸಂದರ್ಭದಲ್ಲಿ ರೇಡಿಯೋ ಕಾಲರ್ ಅಳವಡಿಸಿದ ಕಾಡಾನೆಗಳು ಕೂಡ ಕಂಡುಬAದಿವೆ ಎಂದು ಕಾರ್ಯಾಚರಣೆ ತಂಡದ ಸಿಬ್ಬಂದಿಗಳು ತಿಳಿಸಿದ್ದಾರೆ. ಮಳೆಯ ಮತ್ತು ಕೆಸರಿನ ನಡುವೆ ಕಾರ್ಯಾಚರಣೆ ನಡೆಸುವ ಸಂದರ್ಭದಲ್ಲಿ ಕಾಡಾನೆಗಳ ಹಿಂಡು ಕಾಫಿ ತೋಟಗಳಿಂದ ಕಾಡಿನತ್ತ ತೆರಳಲು ಹಿಂದೇಟು ಹಾಕಿದವು. ಆದರೂ ಕೂಡ ಕಾರ್ಯಾಚರಣೆ ತಂಡವು ಶ್ರಮವಹಿಸಿ ಕಾಡಿಗೆ ಓಡಿಸುವಲ್ಲಿ ಯಶಸ್ವಿಯಾಯಿತು.
ವೀರಾಜಪೇಟೆ ತಾಲೂಕು ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಮಾರ್ಗದರ್ಶನದಲ್ಲಿ ಎ.ಸಿ.ಎಫ್. ಗೋಪಾಲ್ ಹಾಗೂ ತಿತಿಮತಿ ವಲಯ ಅರಣ್ಯ ಅಧಿಕಾರಿ ಗಂಗಾಧರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯ ಅಧಿಕಾರಿ ಶಶಿ, ಆನೆ ಕಾರ್ಯಪಡೆ ಉಪವಲಯ ಅರಣ್ಯ ದೇವರಾಜ್, ಆರ್‌ಆರ್‌ಟಿ ತಂಡದ ಸಿಬ್ಬಂದಿಗಳಾದ ರಂಜಿತ್, ಶಂಕರ್, ಪ್ರದೀಪ್, ರೋಷನ್, ಸುಂದರ, ಧನು, ಪ್ರವೀಣ್, ಪ್ರಜ್ವಲ್, ಅರುಣ ಹಾಗೂ ಆನೆ ಕಾರ್ಯಪಡೆ ಸಿಬ್ಬಂದಿಗಳು ಟಾ.ಟಾ. ಸಂಸ್ಥೆಯ ಎಲಿಫೆಂಟ್ ಟ್ರಾಕ್ಟರ್ಸ್ ಭಾಗವಹಿಸಿದ್ದರು.
- ವಾಸು