ಮಡಿಕೇರಿ, ಅ. ೨೫: ಮಡಿಕೇರಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ವಾರ್ಷಿಕ ಮಹಾಸಭೆ ಹಾಗೂ ಸಂತೋಷಕೂಟ ನ. ೧೬ ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ಸಂಸ್ಥೆ ದೇವಾಲಯವಿದ್ದಂತೆ, ಪ್ರತಿಯೊಬ್ಬರಿಗೆ ತಾವು ಓದಿದ ಶಿಕ್ಷಣ ಸಂಸ್ಥೆಯ ಮೇಲೆ ಅಭಿಮಾನವಿರಬೇಕು.

ವಿದ್ಯಾರ್ಥಿಗಳು ದೇಶದ ಮುಂದಿನ ಭವಿಷ್ಯವಾಗಿದ್ದು, ಉತ್ತಮ ಶಿಕ್ಷಣ, ಅವಕಾಶ ಮತ್ತು ಮಾರ್ಗದರ್ಶನ ದೊರೆತಾಗ ಯುವ ಸಮೂಹದಿಂದ ದೇಶದ ಪ್ರಗತಿಗೆ ಕೊಡುಗೆ ನೀಡಲು ಸಾಧ್ಯವಾಗುತ್ತದೆ. ಕಾರ್ಯಪ್ಪ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಸದಸ್ಯತ್ವ ಪಡೆಯುವ ಮೂಲಕ ಕಾಲೇಜಿನ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಕೈಜೋಡಿಸುವಂತೆ ಕೋರಿದರು.ಹಳೆ ವಿದ್ಯಾರ್ಥಿಗಳ ಸಂಘದ ನೂತನ ಆಡಳಿತ ಮಂಡಳಿ ಸದಸ್ಯತ್ವವವನ್ನು ಹೆಚ್ಚಿಸುವ ಸಲುವಾಗಿ ಸದಸ್ಯತ್ವ ಅಭಿಯಾನವನ್ನು ನಡೆಸುತ್ತಿದೆ. ಕಳೆದ ಒಂದು ವರ್ಷದಲ್ಲಿ ೧೦೦ಕ್ಕೂ ಅಧಿಕ ಮಂದಿ ಸದಸ್ಯತ್ವವನ್ನು ಪಡೆದುಕೊಂಡಿದ್ದಾರೆ.

ನ. ೧೬ ರಂದು ಕಾರ್ಯಕ್ರಮಕ್ಕೆ ಆಗಮಿಸಿ ಸ್ಥಳದಲ್ಲೇ ಖುದ್ದು ಸದಸ್ಯತ್ವ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು. ೧೯೪೯ ರಲ್ಲಿ ಪ್ರಾರಂಭವಾದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ವಜ್ರ ಮಹೋತ್ಸವದ ನೆನಪಿನಲ್ಲಿ ಕಾಲೇಜಿನ ಆವರಣದಲ್ಲಿ ಬಿಲ್‌ಬೋರ್ಡ್ ಹಾಗೂ ಸೆಲ್ಫಿ ಪಾಯಿಂಟ್ ಉದ್ಘಾಟಿಸಲಾಗಿದೆ. ಡಿಜಿಟಲ್ ಲೈಬ್ರರಿ, ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕೆಗೆ ಪೂರಕವಾಗಿ ರೂ. ೨೪,೭೦೦ ಮೌಲ್ಯದ ಕ್ರೀಡಾ ಉಪಕರಣಗಳನ್ನು ಖರೀದಿಸಿ ನೀಡಲಾಗಿದೆ.

ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ "ಛಾಯಾಚಿತ್ರ ಪತ್ರಿಕೋದ್ಯಮದ ವ್ಯಾಪ್ತಿ ಮತ್ತು ಉದ್ಯೋಗಾವಕಾಶ" ಕುರಿತು ಉಪನ್ಯಾಸ ಕಾರ್ಯಕ್ರಮ, ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಕುರಿತ ಕಾರ್ಯಾಗಾರ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಹಲವು ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಲು ನಿರ್ಧರಿಸಲಾಗಿದೆ. ದಾನಿಗಳು ಕೈಜೋಡಿಸಿದರೆ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಹಕಾರಿಯಾಗುತ್ತದೆ ಎಂದು ಬೊಳ್ಳಜಿರ ಬಿ. ಅಯ್ಯಪ್ಪ ತಿಳಿಸಿದರು.ಸಂಘದ ಕಾರ್ಯದರ್ಶಿ ಚಂದನ್ ನಂದರಬೆಟ್ಟು ಮಾತನಾಡಿ, ನ. ೧೬ ರಂದು ಬೆಳಿಗ್ಗೆ ೧೦ ಗಂಟೆಗೆ ಕಾಲೇಜಿನ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ, ಕೊಡಗು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಅಶೋಕ ಎಸ್. ಆಲೂರ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ. ಬಿ. ರಾಘವ ಪಾಲ್ಗೊಳ್ಳಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲರು ಪ್ರೊ. ಮೇಜರ್ ರಾಘವ ಬಿ., ಪ್ರೊ. ತಿಪ್ಪೇಸ್ವಾಮಿ ಈ., ಪ್ರೊ. ಗಾಯತ್ರಿ ದೇವಿ ಎ., ಪ್ರೊ. ಶ್ರೀಧರ್ ಹೆಗ್ಗಡೆ, ಪ್ರೊ. ನಾಗರಾಜು ಕೆ.ಪಿ., ಪ್ರೊ. ಕೃಷ್ಣ ಎಂ.ಪಿ, ಪ್ರೊ. ವಿಜಯಲತಾ ಸಿ, ಪ್ರೊ. ರಾಜೇಂದ್ರ ಆರ್., ಪ್ರೊ. ನಯನ ಕಶ್ಯಪ್, ವಿಜ್ಞಾನಿ ಡಾ. ಜೆ.ಜಿ. ಮಂಜುನಾಥ ಕಾಲೇಜಿಗೆ ಅತೀ ಹೆಚ್ಚು ಅಂಕ ಪಡೆದ ಮೋನಿಶಾ ರೈ (ಬಿ.ಎಸ್.ಸಿ.), ಕೆ.ಎಂ. ಬ್ರೆöÊಟನ್ ಮ್ಯಾಥ್ಯೂ (ಎಂ.ಎ. ಇಂಗ್ಲೀಷ್), ಸಹನಾ ಸಿ.ಕೆ (ಎಂ.ಎ ಕೊಡವ) ಕ್ರೀಡಾ ಸಾಧಕರಾದ ಮೊಹಮ್ಮದ್ ಶಾಹಿಲ್, ಗಡೇಲಾ ಗಾಯತ್ರಿ, ಎಂ.ಡಿ. ಕಾವ್ಯಶ್ರೀ, ಸೀಮಾ ಆನಂದ್ ಪವರ್, ಎನ್.ಸಿ.ಸಿ. ಸಾಧಕರಾದ ಎಂ.ಆರ್. ಹೇಮಂತ್ ಸೇರಿದಂತೆ ಉಪನ್ಯಾಸಕರನ್ನು ಸನ್ಮಾನಿಸಿ ಗೌರವಿಸಲಾಗುವುದು.

ಕಾಲೇಜಿನ ಹಳೇ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಚಂದನ್ ಮನವಿ ಮಾಡಿದರು. ಫೀ.ಮಾ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರು ಹಾಗೂ ಸಂಘದ ಗೌರವಾಧ್ಯಕ್ಷ ಪ್ರೊ. ಮೇಜರ್ ಬಿ. ರಾಘವ ಮಾತನಾಡಿ, ೭೫ ಸಂವತ್ಸರವನ್ನು ಪೂರೈಸಿರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಅಭಿವೃದ್ಧಿಗೆ ಕೊಡಗಿನ ಸಾಕಷ್ಟು ವಿದ್ಯಾರ್ಥಿಗಳು ಶ್ರಮಿಸಿದ್ದಾರೆ. ಹಳೇ ವಿದ್ಯಾರ್ಥಿ ಸಂಘ ಪ್ರತಿಯೊಂದು ವಿಚಾರದಲ್ಲಿ ಆಸಕ್ತಿ ವಹಿಸಿ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡುತ್ತಿದೆ. ಕಾಲೇಜಿನ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸಿ ಭವಿಷ್ಯದ ಪ್ರಜೆಗಳನ್ನು ರೂಪಿಸುವಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಸAಘದ ಉಪಾಧ್ಯಕ್ಷ ಬೊಟ್ಟಂಗಡ ಗಣಪತಿ ಮಾತನಾಡಿ, ಹಳೇ ವಿದ್ಯಾರ್ಥಿ ಸಂಘ ಅನೇಕ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನದ ಕುರಿತು ಕಾರ್ಯಾಗಾರ ನಡೆಸಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡುವುದು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕೈಜೋಡಿಸಿದರೆ ಅಭಿವೃದ್ಧಿ ಕಾರ್ಯಗಳು ಸುಲಲಿತವಾಗಿ ನಡೆಯಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಂಘದ ನಿರ್ದೇಶಕರಾದ ಜಗದೀಶ್ ಸಬ್ಬಂಡ್ರ ಹಾಗೂ ಎಸ್.ಆರ್. ವತ್ಸಲ ಉಪಸ್ಥಿತರಿದ್ದರು.