ಕಣಿವೆ, ಅ. ೨೪: ಕುಶಾಲನಗರ ಹಾಗೂ ಮುಳ್ಳುಸೋಗೆ ಗ್ರಾಮಗಳ ಅದಿದೇವತೆ ಶ್ರೀ ಕೋಣಮಾರಮ್ಮ ದೇವರ ಮೂರು ದಿನಗಳ ವಾರ್ಷಿಕ ಪೂಜೋತ್ಸವ ಶುಕ್ರವಾರ ಸಂಪನ್ನಗೊAಡಿತು. ಶುಕ್ರವಾರ ಮಧ್ಯಾಹ್ನದ ಮಕರ ಲಗ್ನದಲ್ಲಿ ಮಹಾಪೂಜೆ ಹಾಗೂ ಮಹಾಮಂಗಳಾರತಿ ನೆರವೇರಿತು. ಈ ಸಂದರ್ಭ ಚಂಡೆವಾದ್ಯ ಭಕ್ತರ ಗಮನ ಸೆಳೆಯಿತು.
ಪೂಜೋತ್ಸವದ ಅಂಗವಾಗಿ ಕುಶಾಲನಗರದ ವಿವಿಧೆಡೆಗಳ ಭಕ್ತಾದಿಗಳು ಸೇರಿದಂತೆ ನೆರೆಯ ಮುಳ್ಳುಸೋಗೆ, ಗುಮ್ಮನಕೊಲ್ಲಿ, ಗೊಂದಿಬಸವನಹಳ್ಳಿ, ಹಾರಂಗಿ, ಕೊಪ್ಪ ಮೊದಲಾದೆಡೆಗಳಿಂದ ಭಕ್ತ ಜನ ತಂಡೋಪ ತಂಡವಾಗಿ ಆಗಮಿಸಿ ಅಮ್ಮನ ಅಲಂಕಾರ ದರ್ಶನ ಗೈದು ಪುನೀತರಾದರು.
ಪೂಜೋತ್ಸವದ ಕೊನೆಯ ದಿನದ ಅಂಗವಾಗಿ ದೇವಾಲಯ ಸಮಿತಿ ವತಿಯಿಂದ ಅಮ್ಮನಿಗೆ ಪ್ರಿಯವಾದ ಮಾಂಸಾಹಾರಿ ಭೋಜನದ ನೈವೇದ್ಯದೊಂದಿಗೆ ನೆರೆದ ಹಲವು ಭಕ್ತ ಗಣ ಮಾಂಸಾಹಾರಿ ಪ್ರಸಾದ ಸವಿದರೆ, ಇನ್ನೂ ಹಲವರು ಸಸ್ಯಾಹಾರಿ ಪ್ರಸಾದ ಸವಿದರು.
ಕುಶಾಲನಗರ ಠಾಣಾಧಿಕಾರಿ ಹೆಚ್.ಎಸ್. ಗೀತಾ ಅವರ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಮಾಜಿ ಸಚಿವ ಅಪ್ಪಚ್ಚು ರಂಜನ್ ಅಮ್ಮನ ದರ್ಶನÀ ಪಡೆದರು. ದೇವಾಲಯ ಸಮಿತಿ ಅಧ್ಯಕ್ಷ ಚೆಲುವರಾಜು ಸೇರಿದಂತೆ ದೇವಾಲಯದ ಆಡಳಿತ ಮಂಡಳಿ ನಿರ್ದೇಶಕರು ಈ ಸಂದರ್ಭ ಇದ್ದರು. ಪೂಜೋತ್ಸವದ ಹಿನ್ನೆಲೆ ಗೌಡ ಸಮಾಜ ರಸ್ತೆಯಲ್ಲಿ ಜಾತ್ರೆಯೋಪಾದಿಯಲ್ಲಿ ಮಕ್ಕಳು ಹಾಗೂ ಮಹಿಳೆಯರ ಆಕರ್ಷಣೆಯ ಪರಿಕರಗಳು ಮಾರಾಟಗೊಂಡವು.