ಮಡಿಕೇರಿ, ಅ. ೨೪ : ನಾಲ್ಕುನಾಡು ವ್ಯಾಪ್ತಿಯ ನೆಲಜಿ ವ್ಯಾಪ್ತಿಯಲ್ಲಿ ಕಳೆದ ಕೆಲ ದಿನಗಳಿಂದ ಕಾಡಾನೆಗಳ ಉಪಟಳ ಎಲ್ಲೆ ಮೀರಿದ್ದು ಅಲ್ಲಿನ ಜನರು, ರೈತರು ಭಯದ ವಾತಾವರಣ ಎದುರಿಸುವಂತಾಗಿದೆ. ಸ್ಥಳೀಯರ ತೋಟ, ಗದ್ದೆಗಳಿಗೆ ನಿರಂತರವಾಗಿ ಐದಾರು ಆನೆಗಳ ಹಿಂಡು ದಾಳಿ ಮಾಡುತ್ತಿದ್ದು ಫಸಲಿಗೆ ಬಂದಿರುವ ಕಾಫಿ, ಭತ್ತದ ಬೆಳೆ ಸಂಪೂರ್ಣ ಹಾಳಾಗುತ್ತಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲಿನ ನಿವಾಸಿ ಅಪ್ಪುಮಣಿಯಂಡ ಸನ್ನು ಸೋಮಣ್ಣ ಅವರ ಗದ್ದೆಗೆ ಇಳಿದಿರುವ ಆನೆಗಳ ಹಿಂಡು ಬೆಳೆಯನ್ನು ತುಳಿದು ನಾಶಪಡಿಸಿದೆ. ತೋಟಗಳಲ್ಲೂ ಅಪಾರ ನಷ್ಟ ಸಂಭವಿಸಿದೆ. ಇನ್ನಿತರ ಸ್ಥಳೀಯ ನಿವಾಸಿಗಳೂ ಇದೇ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಆನೆಗಳ ಉಪಟಳದಿಂದ ಸಂಜೆಯ ಬಳಿಕ ಮನೆಯಿಂದ ತೆರಳುವುದು, ಸಮಾರಂಭಗಳಿಗೆ ಹೋಗುವುದು, ತುರ್ತು ಸಂದರ್ಭದಲ್ಲೂ ತಿರುಗಾಡಲು ಭಯಪಡುವಂತಾಗಿದೆ. ಇದಲ್ಲದೆ ನಷ್ಟದ ಬಗ್ಗೆ ಅರಣ್ಯ ಇಲಾಖೆಯ ಸ್ಥಳೀಯ ಸಿಬ್ಬಂದಿಗೆ ಮಾಹಿತಿ ನೀಡಲು ನಿರಂತರವಾಗಿ ಕರೆ ಮಾಡಿದರೂ ಕರೆಯನ್ನು ಸ್ವೀಕರಿಸದೆ ನಿರ್ಲಕ್ಷö್ಯ ತೋರುತ್ತಿದ್ದಾರೆ. ಬೆಳೆದ ಫಸಲು ಸಂಪೂರ್ಣ ಆನೆಗಳ ಪಾಲಾದರೆ ಜನರು ಬದುಕುವುದು ಹೇಗೆಂದು ಸನ್ನಿ ಸೋಮಣ್ಣ ಅವರ ಪತ್ನಿ ಡೈಸಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಆನೆಗಳನ್ನು ಅರಣ್ಯಕ್ಕೆ ಅಟ್ಟಬೇಕು ಅಲ್ಲದೆ ಬೆಳೆ ಹಾನಿಗೆ ಸೂಕ್ತ ಪರಿಹಾರ ಒದಗಿಸಬೇಕು, ಅರಣ್ಯ ಇಲಾಖೆಯ ಸಿಬ್ಬಂದಿಗಳ ನಿರ್ಲಕ್ಷö್ಯತನವನ್ನೂ ಗಂಭೀರವಾಗಿ ಪರಿಗಣಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
 
						