ಮಡಿಕೇರಿ, ಅ. ೨೪: ಗುಂಡಿ ಬಿದ್ದ ರಸ್ತೆಯಿಂದ ವಾಹನ ಸವಾರರು ಎದುರಿಸುತ್ತಿದ್ದ ಸಮಸ್ಯೆಯನ್ನು ಮನಗಂಡ ಪೊಲೀಸ್ ಅಧಿಕಾರಿಗಳು ಗುಂಡಿ ಮುಚ್ಚಲು ಕ್ರಮಕೈಗೊಂಡು ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಮಡಿಕೇರಿ-ಕುಶಾಲನಗರ ಹೆದ್ದಾರಿ ನಡುವಿನ ಹಿಂದೂ ರುದ್ರಭೂಮಿ ಎದುರಿನ ರಸ್ತೆಯ ಮಧ್ಯಭಾಗದಲ್ಲಿ ಗುಂಡಿ ಬಿದ್ದು, ಕಬ್ಬಿಣದ ಪೈಪ್ ಹೊರಬಂದು ಸಮಸ್ಯೆಯಾಗುತ್ತಿದ್ದ ವಿಷಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದನ್ನು ಗಮನಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮಡಿಕೇರಿ ನಗರ ವೃತ್ತ ನಿರೀಕ್ಷಕ ಪಿ.ಕೆ. ರಾಜು ಅವರಿಗೆ ಕ್ರಮಕೈಗೊಳ್ಳಲು ಸೂಚಿಸಿದ್ದಾರೆ.

ನಂತರ ಸ್ಥಳಕ್ಕೆ ತೆರಳಿ ಪರಿಶೀಲಿಸಿದ ಪಿ.ಕೆ. ರಾಜು ಹಾಗೂ ಉಪನಿರೀಕ್ಷಕಿ ಅನ್ನಪೂರ್ಣ ಅವರುಗಳು ಹೆದ್ದಾರಿ ಪ್ರಾಧಿಕಾರದ ಗಮನಕ್ಕೆ ತಂದು ತಕ್ಷಣ ಸಿಬ್ಬಂದಿ ಮೂಲಕ ಗುಂಡಿ ಮುಚ್ಚಿ ಕಾಂಕ್ರಿಟ್ ಹಾಕಿ ತಾತ್ಕಾಲಿಕವಾಗಿ ರಸ್ತೆಯನ್ನು ದುರಸ್ತಿಪಡಿಸಿದ್ದಾರೆ.