ಮಡಿಕೇರಿ, ಅ. ೨೧: ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ದೇಶ ಸೇರಿದಂತೆ ವಿದೇಶಗಳಲ್ಲೂ ಕಂಡುಬರುತ್ತದೆ. ಅವರ ಚಿಂತನೆ, ಸಾಧನೆ, ದೇಶಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸುವ ಉದ್ದೇಶದಿಂದ ಪ್ರತಿಮೆ ನಿರ್ಮಾಣವಾಗುತ್ತದೆ. ಆದರೆ, ಕೊಡಗಿನ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಮಾತ್ರ ಅಂಬೇಡ್ಕರ್ ಪ್ರತಿಮೆ ನಿರ್ಮಾಣದ ಕನಸು ದಶಕಗಳಿಂದಲೂ ಕನಸಾಗಿಯೇ ಉಳಿದುಕೊಂಡಿದೆ.

ಕರ್ನಾಟಕದ ಬಹುತೇಕ ಜಿಲ್ಲಾ ಕೇಂದ್ರಗಳಲ್ಲಿ ದೇಶದ ಮಹಾನ್ ನಾಯಕ ಅಂಬೇಡ್ಕರ್ ಪ್ರತಿಮೆ, ಪುತ್ಥಳಿಗಳು ಕಾಣಸಿಗುತ್ತವೆ. ಆದರೆ, ಕೊಡಗಿನ ಸೋಮವಾರಪೇಟೆಯಲ್ಲಿ ಹೊರತುಪಡಿಸಿ ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಎಲ್ಲಿಯೂ ಪ್ರತಿಮೆ ಇಲ್ಲದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಮಡಿಕೇರಿಯಲ್ಲಿ ಪ್ರತಿಮೆ ನಿರ್ಮಿಸಬೇಕೆಂದು ಹಲವು ವರ್ಷಗಳಿಂದ ದಲಿತ ಸಂಘಟನೆಗಳು ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು, ಸಭೆ-ಸಮಾರಂಭಕ್ಕೆ ಬರುವ ಸಚಿವರಿಗೆ ಮನವಿ ಸಲ್ಲಿಸಿ ಒತ್ತಾಯ ಮಾಡುತ್ತ ಬರುತ್ತಿದ್ದರೂ ಫಲಪ್ರದವಾಗಿರಲಿಲ್ಲ.

ಆದರೆ, ಕೆಲ ತಿಂಗಳ ಹಿಂದೆ ಮಡಿಕೇರಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಂಡು ಯೋಜನೆ ಕೈಗೆತ್ತಿಕೊಳ್ಳಲಾಯಿತು. ಇದಕ್ಕಾಗಿ ನಗರಸಭೆ ವ್ಯಾಪ್ತಿಯಲ್ಲಿ ಜಾಗ ಇರುವುದರಿಂದ ಜನಪ್ರತಿನಿಧಿಗಳ ಒಮ್ಮತ ಬೇಕಾಗಿತ್ತು. ನಗರಸಭೆ ಕೌನ್ಸಿಲ್ ವಿಶೇಷ ಸಾಮಾನ್ಯ ಸಭೆಯ ಠರಾವು ಮಂಡಿಸಿ ಸದಸ್ಯರು ಒಮ್ಮತ ಸೂಚಿಸಿ ನಿರ್ಣಯಿಸಿದ ಹಿನ್ನೆಲೆ ಪ್ರತಿಮೆ ನಿರ್ಮಾಣಕ್ಕೆ ಒಪ್ಪಿಗೆ ದೊರೆತು ನಗರದ ಫೀ.ಮಾ. ಕಾರ್ಯಪ್ಪ ವೃತ್ತದ ಬಳಿಯ ಗುಡ್ಡೆಮನೆ ಅಪ್ಪಯ್ಯ ಗೌಡರ ಪ್ರತಿಮೆ ಸಮೀಪದ ಉದ್ಯಾನವನದಲ್ಲಿ ಜಾಗ ಗುರುತು ಮಾಡಿ ಸಲಹೆ ಮತ್ತು ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು. ಅನಂತರ ಜಾಗದ ಕುರಿತು ಕೆಲ ಆಕ್ಷೇಪಣೆಗಳು ಬಂದಿದ್ದವು. ಸದಸ್ಯರು ಬಂದಿರುವ ಆಕ್ಷೇಪಣೆಗಳನ್ನು ತಿರಸ್ಕರಿಸಿದ ಹಿನ್ನೆಲೆ ಪ್ರತಿಮೆ ನಿರ್ಮಾಣಕ್ಕೆ ಇದೇ ಜಾಗ ಅಂತಿಮವಾಗಿತ್ತು.

ಮೊದಲು ನಗರದ ಅಂಬೇಡ್ಕರ್ ಭವನ ಎದುರು ಪ್ರತಿಮೆ ನಿರ್ಮಿಸಬೇಕೆಂಬ ಬೇಡಿಕೆ ಇತ್ತು. ಇದು ಖಾಸಗಿ ಜಾಗ ಎಂಬ ಕಾರಣಕ್ಕೆ ಪ್ರಸ್ತಾಪಿತ ಜಾಗವನ್ನು ತಿರಸ್ಕರಿಸಿ ಇದೀಗ ಆಯ್ಕೆಗೊಂಡಿರುವ ಜಾಗವನ್ನು ಅಂತಿಮಗೊಳಿಸಲಾಯಿತು. ಪ್ರತಿಮೆ ನಿರ್ಮಾಣಕ್ಕೆ ಸಂಬAಧಪಟ್ಟ ಇಲಾಖೆಯಿಂದ ಅನುಮೋದನೆಯನ್ನು ಪಡೆಯಲಾಗಿದ್ದು, ನಗರಸಭೆ ನಿರ್ಮಾಣದ ಮೇಲುಸ್ತುವಾರಿಯನ್ನು ಹೊತ್ತುಕೊಂಡಿದೆ. ಆದರೆ, ಪ್ರಕ್ರಿಯೆ ಮುಂದುವರೆಯದೆ ಸರಕಾರದಿಂದ ನಿರ್ಮಾಣವಾಗಬೇಕಾಗಿದ್ದ ಪ್ರತಿಮೆ ನಿರ್ಮಾಣ ಕಾರ್ಯ ನೆನೆಗುದಿಗೆ ಬಿದ್ದಿದೆ. ಇದಕ್ಕಾಗಿ ಜಾಗ ಗುರುತು ಮಾಡಿದ್ದು ಹೊರತುಪಡಿಸಿ ಕ್ರಿಯಾ ಯೋಜನೆಯಾಗಲಿ, ಅಂದಾಜು ಮೊತ್ತವನ್ನಾಗಲಿ ನಿಗದಿಪಡಿಸುವ ಗೋಜಿಗೆ ಇದುವರೆಗೂ ಯಾರೂ ಹೋಗಿಲ್ಲ. ಇವೆಲ್ಲದರ ಪರಿಣಾಮ ಪ್ರತಿಮೆ ನಿರ್ಮಾಣ ಮೂಲೆಗುಂಪಾಗಿದೆ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿದೆ.