ಸೋಮವಾರಪೇಟೆ,ಅ.೨೦: ಬೇಳೂರು ಗ್ರಾಮ ಪಂಚಾಯಿತಿಯಲ್ಲಿ ಕಂಪ್ಯೂಟರ್ ಆಪರೇಟರ್ ವಿರುದ್ಧ ಗ್ರಾ.ಪಂ. ಅಧ್ಯಕ್ಷರು ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಸದಸ್ಯರು ಹಾಗೂ ನೌಕರರಿಗೆ ಕಚೇರಿಯಲ್ಲಿ ಕಿರುಕುಳ ನೀಡುತ್ತಾ, ಬೆದರಿಕೆ ಒಡ್ಡುವುದಲ್ಲದೇ ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿರುವ ಮಹಿಳಾ ನೌಕರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಅಧ್ಯಕ್ಷೆ ಪಾರ್ವತಿ ಮನವಿ ಮಾಡಿದ್ದಾರೆ.

ಪಂಚಾಯಿತಿ ಸಿಬ್ಬಂದಿ ಪವಿತ್ರ ಎಂಬವರು ಆಡಳಿತ ಮಂಡಳಿ ಸದಸ್ಯರಿಗೆ ಅಗೌರವ ತೋರಿದ್ದರಿಂದ ತಾ. ೨೭.೦೬.೨೦೨೫ರ ಸಾಮಾನ್ಯ ಸಭೆ ಬಹಿಷ್ಕರಿಸಲಾಗಿತ್ತು. ಈ ಹಿನ್ನೆಲೆ ಸಿಬ್ಬಂದಿಗೆ ನೋಟೀಸ್ ನೀಡಿದ್ದು, ಇದಕ್ಕೆ ಉತ್ತರವಾಗಿ ಎಲ್ಲಾ ಸದಸ್ಯರ ವಿರುದ್ಧ ಆಧಾರ ರಹಿತ ಆರೋಪಗಳನ್ನು ಮಾಡಿದ್ದಾರೆ.

ಈ ಹಿನ್ನೆಲೆ ೧೫.೧೦.೨೦೨೫ರಂದು ಸಾಮಾನ್ಯ ಸಭೆಯ ತೀರ್ಮಾನದಂತೆ ೨ನೇ ನೋಟೀಸ್ ನೀಡಲಾಗಿದೆ. ಇದಕ್ಕೆ ಸೂಕ್ತ ಉತ್ತರ ನೀಡದೇ ಪೂರ್ವ ನಿಗದಿಯಂತೆ ಕಚೇರಿಗೆ ವಿಷದ ಬಾಟಲಿ ತಂದು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಹಸನ ನಡೆಸಿದ್ದು, ಇದು ಆಡಳಿತ ಮಂಡಳಿ, ಇತರ ಸಿಬ್ಬಂದಿಗಳನ್ನು ಬ್ಲಾಕ್‌ಮೇಲ್ ಮಾಡಿ ಬೆದರಿಸುವ ಯತ್ನವಾಗಿದೆ. ಈ ಹಿನ್ನೆಲೆ ನೌಕರಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅಧ್ಯಕ್ಷೆ ಪಿ.ಎಂ. ಪಾರ್ವತಿ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.