ಸೋಮವಾರಪೇಟೆ, ಅ. ೨೦: ರಾಷ್ಟçಕವಿ ಕುವೆಂಪು ಪ್ರತಿಮೆ ನಿರ್ಮಾಣ ಸಮಿತಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಕಸಾಪ ಭವನದ ಮುಂಭಾಗ ನಿರ್ಮಿಸಿರುವ ವಿಶ್ವಮಾನವ ಕುವೆಂಪು ಪ್ರತಿಮೆಯ ಲೋಕಾರ್ಪಣೆ ಕಾರ್ಯಕ್ರಮ ತಾ. ೨೪ರಂದು ನಡೆಯಲಿದೆ ಎಂದು ಪ್ರತಿಮೆ ನಿರ್ಮಾಣ ಸಮಿತಿ ಅಧ್ಯಕ್ಷ ಜೆ.ಸಿ. ಶೇಖರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ ೧೧ಗಂಟೆಗೆ ಶಾಸಕ ಡಾ. ಮಂತರ್ ಗೌಡ ಅವರು ಕುವೆಂಪು ಅವರ ಪ್ರತಿಮೆ ಅನಾವರಣ ಮಾಡಲಿದ್ದಾರೆ. ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್, ಮಾಜಿ ಸಚಿವರಾದ ಬಿ.ಎ. ಜೀವಿಜಯ, ಎಂ.ಪಿ. ಅಪ್ಪಚ್ಚು ರಂಜನ್, ಕೊಡಗು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವಕಾಮತ್, ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ಕುಪ್ಪಳ್ಳಿ ಕುವೆಂಪು ಪ್ರತಿಷ್ಠಾನದ ಖಜಾಂಚಿ ಡಿ.ಎಂ. ಮನುದೇವ್ ದೇವಾಂಗಿ, ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಡಿ. ವಿಜೇತ ಉಪಸ್ಥಿತರಿರುವರು ಎಂದು ತಿಳಿಸಿದರು.
ತಾಲೂಕು ಪ್ರಥಮ ಸಾಹಿತ್ಯ ಸಮ್ಮೇಳನದ ಖಜಾಂಚಿ ಎ.ಆರ್. ಮುತ್ತಣ್ಣ ಮಾತನಾಡಿ, ವಿಶ್ವಮಾನವನಾಗಿ ಕುವೆಂಪು ಅವರು ಗುರುತಿಸಿಕೊಂಡಿದ್ದರು. ರಾಮಾಯಣ ಸೇರಿದಂತೆ ಸಾಕಷ್ಟು ಗ್ರಂಥಗಳನ್ನು ಸಮಾಜಕ್ಕೆ ನೀಡಿದ್ದಾರೆ. ಇವರ ನೆನಪಿಗಾಗಿ ಕುವೆಂಪು ಪುತ್ಥಳಿ ನಿರ್ಮಾಣ ಶ್ಲಾಘನೀಯ ಎಂದರು.
ಗೋಷ್ಠಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಡಿ. ವಿಜೇತ, ಗೌರವ ಕಾರ್ಯದರ್ಶಿ ಎ.ಪಿ. ವೀರರಾಜು, ಗೌರವ ಖಜಾಂಚಿ ಕೆ.ಪಿ. ದಿನೇಶ್ ಹಾಗೂ ಸಾಹಿತ್ಯ ಸಮ್ಮೇಳನದ ಖಜಾಂಚಿ ಎ.ಆರ್. ಮುತ್ತಣ್ಣ ಇದ್ದರು.