ನಾಪೋಕ್ಲು, ಅ. ೨೧: ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸಲು ಕ್ರೀಡಾಕೂಟಗಳ ಆಯೋಜನೆ ಅಗತ್ಯ ಎಂದು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಹೇಳಿದರು.

ಮರಂದೋಡ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಆಟದ ಮೈದಾನದಲ್ಲಿ ಕುಂಜಿಲ -ಕಕ್ಕಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಹಮ್ಮಿಕೊಂಡಿರುವ ೪೨ನೇ ವರ್ಷದ ವಾರ್ಷಿಕ ಕ್ರೀಡಾಕೂಟ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ವರ್ಷದಲ್ಲಿ ಒಂದು ಬಾರಿ ಎಲ್ಲಾ ಗ್ರಾಮಸ್ಥರು ಒಂದೆಡೆ ಸೇರಿ ಕ್ರೀಡಾಕೂಟದಲ್ಲಿ ಭಾಗವಹಿಸುವುದರಿಂದ ಗ್ರಾಮದಲ್ಲಿ ಒಗ್ಗಟ್ಟು ಹೆಚ್ಚಾಗುತ್ತದೆ.

ಈ ಭಾಗದಲ್ಲಿ ಕ್ರೀಡಾಂಗಣ ನಿರ್ಮಿಸಲು ತಮ್ಮ ಸಹಕಾರ ನೀಡಲಾಗುವುದು. ಈಗಾಗಲೇ ಈ ಭಾಗಕ್ಕೆ ಹಲವು ರಸ್ತೆಗಳ ಅಭಿವೃದ್ಧಿಗೆ ಬೇಡಿಕೆ ಬಂದಿದ್ದು ಹಂತ ಹಂತವಾಗಿ ಎಲ್ಲವನ್ನೂ ಈಡೇರಿಸುವುದಾಗಿ ಭರವಸೆ ನೀಡಿದರು. ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಸಹಿಸದ ಬಿಜೆಪಿ ಹತಾಶೆಯಿಂದ ಇಲ್ಲಸಲ್ಲದ ಅಪಪ್ರಚಾರ ಮಾಡುವುದರಲ್ಲಿ ತೊಡಗಿದೆ. ಅಂತಹ ಸುಳ್ಳುಗಳಿಗೆ ಕೊಡಗಿನ ಪ್ರಜ್ಞಾವಂತ ಜನರು ಮೋಸ ಹೋಗುವುದಿಲ್ಲ ಎಂದರು.

ಕ್ರೀಡಾಕೂಟದ ಅಧ್ಯಕ್ಷರೂ ಗ್ರಾಮ ಪಂಚಾಯಿತಿ ಸದಸ್ಯರು ಆಗಿರುವ ಚೊಯಮಾಡಂಡ ಹರೀಶ್ ಮೊಣ್ಣಪ್ಪ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಮಾಜಿ ಸೈನಿಕ ಚೊಯಮಾಡಂಡ ಸೂರಿ ಮುತ್ತಪ್ಪ, ನಿವೃತ್ತ ಹವಲ್ದಾರ್ ಎಚ್.ಕೆ. ವಿಜಯ, ನಿವೃತ ಸಬ್ ಇನ್ಸ್ಪೆಕ್ಟರ್ ಕೆ.ಪಿ. ಪೂವಯ್ಯ, ಕುಂಜಿಲ ಕಕ್ಕಬೆ ಗ್ರಾಮ ಪಂಚಾಯಿತಿ ಸದಸ್ಯೆ ಕೆ.ಆರ್. ಲೀಲಾವತಿ, ಕ್ರೀಡಾಕೂಟದ ಸಮಿತಿ ಕಾರ್ಯದರ್ಶಿ ಮುಕ್ಕಾಟೀರ ಅಜಿತ್, ಖಜಾಂಚಿ ಚಂಡಿರ ರ‍್ಯಾಲಿ ಗಣಪತಿ, ಜಿ.ಪಂ. ಕೆಡಿಪಿ ಸದಸ್ಯ ಬಾಚಮಾಂಡ ಲವ ಚಿಣ್ಣಪ್ಪ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶೈಲಾ ಕುಟ್ಟಪ್ಪ, ಹಾಗೂ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.