ಕುಶಾಲನಗರ, ಅ. ೨೧: ಸಿಐಟಿಯು ಆರನೇ ಜಿಲ್ಲಾ ಸಮ್ಮೇಳನ ನವೆಂಬರ್ ೨ ರಿಂದ ೨ ದಿನಗಳ ಕಾಲ ಕುಶಾಲನಗರದಲ್ಲಿ ನಡೆಯಲಿದೆ ಎಂದು ಸಿಐಟಿಯು ಕೊಡಗು ಜಿಲ್ಲಾಧ್ಯಕ್ಷ ಪಿ.ಆರ್. ಭರತ್ ತಿಳಿಸಿದ್ದಾರೆ.

ಕುಶಾಲನಗರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಕಾರ್ಮಿಕರ ಸಂಹಿತೆಯನ್ನು ವಿರೋಧಿಸಿ ಕಾರ್ಮಿಕರ ಕನಿಷ್ಠ ವೇತನಕ್ಕೆ ಆಗ್ರಹಿಸಿ, ಜಿಲ್ಲೆಯಲ್ಲಿ ಕಾಡುಪ್ರಾಣಿಗಳ ದಾಳಿಯಿಂದ ಮಾನವ ಜೀವವನ್ನು ಉಳಿಸಲು ಆಗ್ರಹಿಸಿ ನಡೆಯುವ ಜಿಲ್ಲಾ ಸಮ್ಮೇಳನದಲ್ಲಿ ರೈತರ ಕೃಷಿ ರಕ್ಷಣೆ ಜಿಲ್ಲೆಯ ನಿವೇಶನ ರಹಿತ ಕುಟುಂಬಗಳಿಗೆ ನಿವೇಶನಕ್ಕೆ ಒತ್ತಾಯಿಸಿ ಜೊತೆಗೆ ಸಮೃದ್ಧ ಸೌಹಾರ್ದ ಕೊಡಗು ಜಿಲ್ಲೆಗಾಗಿ ನಿರ್ಣಯಗಳನ್ನು ಕೈಗೊಳ್ಳಲಾಗುವುದು ಎಂದರು.

೨೦೨೬ರಲ್ಲಿ ಸಂಘಟನೆಯ ೧೮ನೇ ಅಖಿಲ ಭಾರತ ಸಮ್ಮೇಳನ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ೧೬ನೇ ರಾಜ್ಯ ಸಮ್ಮೇಳನ ಹಾಸನ ಜಿಲ್ಲೆಯಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಹಿಂದಿನ ಅವಧಿಯಲ್ಲಿ ನಡೆಸಿದ ಕಾರ್ಯಕ್ರಮಗಳು ಚಳುವಳಿಗಳು ಮತ್ತಿತರ ವಿಷಯಗಳ ಬಗ್ಗೆ ಸಮ್ಮೇಳನದಲ್ಲಿ ಸಮಗ್ರ ಚರ್ಚೆ ನಡೆಯಲಿದೆ. ಸಂಘಟನಾತ್ಮಕ ಲೋಪದೋಷಗಳ ಬಗ್ಗೆ ಚರ್ಚಿಸುವುದರೊಂದಿಗೆ ಪ್ರಸಕ್ತ ಕಾರ್ಮಿಕ ವರ್ಗ ಎದುರಿಸುತ್ತಿರುವ ಸವಾಲುಗಳ ಪರಿಹಾರಕ್ಕೆ ಕಾರ್ಮಿಕರನ್ನು ಸಂಘಟಿಸಿ ನ್ಯಾಯಕ್ಕಾಗಿ ಹೋರಾಟ ಮಾಡುವ ಬಗ್ಗೆ ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸಮ್ಮೇಳನದಲ್ಲಿ ಪ್ರಜಾಸತ್ತಾತ್ಮಕ ವಾದ ರೀತಿಯಲ್ಲಿ ಮುಂದಿನ ಮೂರು ವರ್ಷಕ್ಕೆ ಚಳುವಳಿಯನ್ನು ಮುನ್ನಡೆಸಲು ನೂತನ ಸಮಿತಿ ರಚಿಸಲಾಗುವುದು ಎಂದರು.

ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಸಮ್ಮೇಳನದ ಸ್ವಾಗತ ಸಮಿತಿಯ ಗೌರವ ಅಧ್ಯಕ್ಷರಾಗಿರುವ ವಿ.ಪಿ. ಶಶಿಧರ್ ಮಾತನಾಡಿ, ಸಮ್ಮೇಳನದ ಮೂಲಕ ಕಾರ್ಮಿಕರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯುವ ಬಗ್ಗೆ ಚರ್ಚೆ ನಡೆದು ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ವೇದಿಕೆ ನಿರ್ಮಾಣವಾಗಲಿದೆ ಎಂದು ಹೇಳಿದರು. ಇದೇ ಸಂದರ್ಭ ಜಿಲ್ಲಾ ಸಮ್ಮೇಳನದ ಭಿತ್ತಿ ಪತ್ರಗಳ ಬಿಡುಗಡೆ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಮ್ಮೇಳನದ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರಾದ ವಿ.ಎಸ್. ಸಜಿ, ಕೊಡಗು ಜಿಲ್ಲಾ ಜನರಲ್ ವರ್ಕರ್ಸ್ ಯೂನಿಯನ್ ಮುಖಂಡರಾದ ಹೆಚ್.ಬಿ. ರಮೇಶ್, ಸಿಐಟಿಯು ಜಿಲ್ಲಾ ಖಜಾಂಚಿ ಎನ್.ಡಿ. ಕುಟ್ಟಪ್ಪನ್ ಮತ್ತು ಕೊಡಗು ಜಿಲ್ಲಾ ಕಟ್ಟಡ ಕಾರ್ಮಿಕ ಸಂಘದ ಕಾರ್ಯದರ್ಶಿ ಕೆ.ಎಸ್. ರಮೇಶ್ ಇದ್ದರು.