ಮಡಿಕೇರಿ, ಅ. ೨೧: ಮಡಿಕೇರಿಯ ಕಲಾ ನಗರ ಸಾಂಸ್ಕೃತಿಕ ಕಲಾ ವೇದಿಕೆ ವತಿಯಿಂದ ೧೨ನೇ ವರ್ಷದ ದೀಪಾವಳಿ ಉತ್ಸವ ಹಮ್ಮಿಕೊಳ್ಳಲಾಗಿದ್ದು, ತಾ.೨೬ರಂದು ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ವೇದಿಕೆಯ ಅಧ್ಯಕ್ಷ ಆರ್. ಮಹೇಶ್; ವೇದಿಕೆ ವತಿಯಿಂದ ವರ್ಷಂಪ್ರತಿ ದೀಪಾವಳಿ ಉತ್ಸವ ಹಮ್ಮಿಕೊಂಡು ಬರಲಾಗುತ್ತಿದ್ದು, ಇದರ ಅಂಗವಾಗಿ ಈ ಬಾರಿ ಬೆಳಿಗ್ಗೆ ೧೦ ಗಂಟೆಯಿAದ ಸಂಪಿಗೆಕಟ್ಟೆ, ಕನ್ನಂಡಬಾಣೆ, ಚೈನ್‌ಗೇಟ್, ರಾಘವೇಂದ್ರ ದೇವಸ್ಥಾನದ ಸುತ್ತಮುತ್ತ ನಿವಾಸಿಗಳಿಗಾಗಿ ಕ್ರೀಡಾಕೂಟ ನಡೆಯಲಿದೆ. ಚಿಕ್ಕ ಮಕ್ಕಳಿಗೆ ಕಾಳು ಹೆಕ್ಕುವ ಸ್ಪರ್ಧೆ, ನಿಂಬೆ ಚಮಚ ಓಟ(ಮಹಿಳೆಯರಿಗೆ), ಸಂಗೀತ ಕುರ್ಚಿ, ಪುರುಷ ಮತ್ತು ಮಹಿಳೆಯರಿಗೆ ಕ್ರಿಕೆಟ್ ಪಂದ್ಯಾಟ, ವಿವಿಧ ವಿಭಾಗಗಳಲ್ಲಿ ೧೦೦ ಮೀಟರ್ ಓಟ, ಪುರುಷ ಮತ್ತು ಮಹಿಳೆಯರಿಗೆ ಹಗ್ಗಜಗ್ಗಾಟ, ಹಿರಿಯ ನಾಗರಿಕರಿಗೆ ವೇಗದ ನಡಿಗೆ ಸ್ಪರ್ಧೆ ನಡೆಯಲಿದೆ. ಮಹಿಳೆಯರಿಗೆ ಮಧ್ಯಾಹ್ನದ ನಂತರ ಕ್ರೀಡಾಕೂಟ ನಡೆಯಲಿದೆ ಎಂದು ತಿಳಿಸಿದರು.
ರಂಗೋಲಿ-ಮAಟಪ ಸ್ಪರ್ಧೆ
ಉತ್ಸವದ ಪ್ರಯುಕ್ತ ಮುಂಬರುವ ನ.೨೨ರಂದು ಬೆಳಿಗ್ಗೆ ೯ ಗಂಟೆಗೆ ರಾಘವೇಂದ್ರ ದೇವಾಲಯದ ಬಳಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿದೆ. ನಂತರ ಚಿತ್ರಕಲಾ ಸ್ಪರ್ಧೆ ನಡೆಯಲಿದೆ. ಛದ್ಮವೇಶ, ನಾಟಕ, ನೃತ್ಯ, ಸಮೂಹ ನೃತ್ಯ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದರೊಂದಿಗೆ ಮಡಿಕೇರಿ ನಗರದ ಮಕ್ಕಳ ಪತ್ರಿಭೆಗೆ ಅವಕಾಶ ನೀಡುವ ನಿಟ್ಟಿನಲ್ಲಿ ಮಕ್ಕಳ ಮಂಟಪ ಸ್ಪರ್ಧೆ ಏರ್ಪಡಿಸಲಾಗಿದ್ದು, ಅಂದು ರಾತ್ರಿ ೧೦ ಗಂಟೆಗೆ ಪ್ರದರ್ಶನ ಸ್ಪರ್ಧೆ ನಡೆಯಲಿದೆ. ಎಲ್ಲ ಮಂಟಪಗಳಿಗೂ ಏಕರೂಪದ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ಬಳಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಈ ಸಂದರ್ಭ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಇಚ್ಛಿಸುವವರು ಮಂಜುಳಾ (೯೯೮೦೬೮೩೦೩೪) ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಮಹೇಶ್ ತಿಳಿಸಿದರು.
ಗೋಷ್ಠಿಯಲ್ಲಿ ವೇದಿಕೆಯ ಕಾರ್ಯಾಧ್ಯಕ್ಷ ಪಿ.ಬಿ. ಸುರೇಶ್, ಕಾರ್ಯದರ್ಶಿ ಪಿ.ಎಂ. ರಮೇಶ್, ಸದಸ್ಯರಾದ ಎಂ.ಟಿ. ಮಧು, ಎಂ.ಸಿ. ಶ್ರೀನಿವಾಸ್ ಉಪಸ್ಥಿತರಿದ್ದರು.