ಸೋಮವಾರಪೇಟೆ, ಅ. ೨೦ : ಇನ್ನರ್ವ್ಹೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ವತಿಯಿಂದ ಎರಡು ಸ್ವಚ್ಚತಾ ಫಲಕಗಳನ್ನು ರಸ್ತೆ ಬದಿಯಲ್ಲಿ ಅಳವಡಿಸಲಾಯಿತು.
ಶನಿವಾರಸಂತೆ ರಸ್ತೆಯ ವಿಶ್ವ ಮಾನವ ಕುವೆಂಪು ಶಾಲೆಯ ಮುಂಭಾಗದ ರಸ್ತೆ ಬದಿ ಹಾಗು ಚನ್ನಬಸಪ್ಪ ಸಭಾಂಗಣದ ಮುಂಭಾಗದ ಅನತಿ ದೂರದಲ್ಲಿ ಫಲಕಗಳನ್ನು ಅಳವಡಿಸಲಾಯಿತು.
ಸ್ವÀಚ್ಛತೆ ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಶಾಲಾ ಮಕ್ಕಳು ತಿರುಗಾಡುವ ರಸ್ತೆಯ ಬದಿಯಲ್ಲಿ ಕಸದ ಚೀಲಗಳನ್ನು ಎಸೆದು ಹೋಗುತ್ತಿದ್ದಾರೆ. ಇದರಿಂದ ಸಮಸ್ಯೆ ಉಂಟಾಗಿದೆ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಟಿಸಿಜಿ ಪಿಯು ಕಾಲೇಜಿನ ಪ್ರಾಂಶುಪಾಲರಾದ ಮಿಲ್ಡ್ರೆಡ್ ಗೋನ್ಸಾಲ್ವೆಸ್ ಹೇಳಿದರು.
ಕುವೆಂಪು ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಅನೇಕ ಬಾರಿ ರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಚತಾ ಕಾರ್ಯವನ್ನು ಮಾಡಿದ್ದಾರೆ. ಕಸವನ್ನು ರಸ್ತೆ ಬದಿಯಲ್ಲಿ ಎಸೆಯುವವರು ಇನ್ನಾದರೂ ಪ್ರಜ್ಞಾವಂತರಾಗಬೇಕು ಎಂದು ಹೇಳಿದರು.
ಸಂಘ ಸಂಸ್ಥೆಗಳಿAದ ಪರಿಸರ ಜಾಗೃತಿ ಕಾರ್ಯಕ್ರಮ ನಡೆಯಬೇಕು. ಇನ್ನರ್ ವ್ಹೀಲ್ ಮಹಿಳಾ ಕ್ಲಬ್ನ ಸದಸ್ಯರು ಅನೇಕ ಸಮಾಜಮುಖಿ ಕೆಲಸ ಗಳನ್ನು ಮಾಡುತ್ತಿರುವುದು ಶ್ಲಾಘನೀಯ. ಅದರಲ್ಲೂ ಇತ್ತೀಚೆಗೆ ಶಾಲಾ-ಕಾಲೇಜು ಶಿಕ್ಷಕಿಯರಿಗೆ ಉಚಿತ ಹೃದಯ ತಪಾಸಣೆ ಶಿಬಿರ ನಡೆಸಿದ್ದಾರೆ. ಈ ಕಾರ್ಯಕ್ರಮದ ಬಗ್ಗೆ ಶಿಕ್ಷಕಿಯರು ಶ್ಲಾಘಿಸಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಚೌಡ್ಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನತೀಶ್ ಮಂದಣ್ಣ ಮಾತನಾಡಿ, ರಸ್ತೆ ಬದಿಯಲ್ಲಿ ಕಸ ಎಸೆಯುವವರಿಗೆ ಕಾನೂನು ರೀತಿಯಲ್ಲಿ ಸೂಕ್ತ ಕ್ರಮಕೈಗೊಳ್ಳಬೇಕು. ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸಿ ಕಸ ಎಸೆಯುವವರನ್ನು ಪತ್ತೆಹಚ್ಚಿ ಬಂಧಿಸಬೇಕಿದೆ. ಕೋಳಿಯ ತಾಜ್ಯವನ್ನು ಮೂಟೆಯಲ್ಲಿ ಕಟ್ಟಿ ರಸ್ತೆ ಬದಿಯಲ್ಲಿ ಎಸೆಯಲಾಗುತ್ತಿದ್ದು, ಇಂತವರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕ್ಲಬ್ನ ಅಧ್ಯಕ್ಷೆ ತನ್ಮಯಿ ಪ್ರವೀಣ್, ಕಾರ್ಯದರ್ಶಿ ಸುವಿನಾ ಕೃಪಾಲ್ ಪದಾಧಿಕಾರಿಗಳಾದ ಅಮ್ರಿತಾ ಕಿರಣ್, ಕಾವೇರಿ ಸುರೇಶ್, ಸರಿತಾ ರಾಜೀವ್, ನಂದಿನಿ ಗೋಪಾಲ್, ಸ್ಮಿತ ನವೀನ್, ನಯನ ಪುರುಷೋತ್ತಮ್ ಇದ್ದರು.